ADVERTISEMENT

ನಾಲ್ಕು ದಿನಗಳಾದರೂ ತೆರವಾಗಿಲ್ಲ ಆಯುಧ ಪೂಜೆ ಕಸ

ತಕ್ಷಣವೇ ತೆರವುಗೊಳಿಸಲು ಮೇಯರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 19:18 IST
Last Updated 22 ಅಕ್ಟೋಬರ್ 2018, 19:18 IST
ಹಬ್ಬ ಮುಗಿದು ನಾಲ್ಕು ದಿನಗಳೇ ಕಳೆದಿದ್ದರೂ, ನಗರದ ಕೆ.ಆರ್‌.ಮಾರುಕಟ್ಟೆಯ ಮೇಲ್ಸೇತುವೆ ಕೆಳಗೆ ಬಿದ್ದಿರುವ ಕಸದ ರಾಶಿ ತೆರವು ಮಾಡಿಲ್ಲ -–ಪ್ರಜಾವಾಣಿ ಚಿತ್ರ
ಹಬ್ಬ ಮುಗಿದು ನಾಲ್ಕು ದಿನಗಳೇ ಕಳೆದಿದ್ದರೂ, ನಗರದ ಕೆ.ಆರ್‌.ಮಾರುಕಟ್ಟೆಯ ಮೇಲ್ಸೇತುವೆ ಕೆಳಗೆ ಬಿದ್ದಿರುವ ಕಸದ ರಾಶಿ ತೆರವು ಮಾಡಿಲ್ಲ -–ಪ್ರಜಾವಾಣಿ ಚಿತ್ರ   

ಬೆಂಗಳೂರು: ಆಯುಧ ಪೂಜೆ ಮುಗಿದು ನಾಲ್ಕು ದಿನಗಳ ಬಳಿಕವೂ ಹಬ್ಬದ ಕಸ ತೆರವುಗೊಂಡಿಲ್ಲ. ನಗರದ ಬಹುತೇಕ ಕಡೆ ಬಾಳೆಗಿಡ ಹಾಗೂ ಹೂಗಳ ಕಸ ರಾಶಿ ಬಿದ್ದಿದೆ.

ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಮೇಯರ್‌ ಗಂಗಾಂಬಿಕೆ ಅವರು ಕೆ.ಆರ್‌.ಮಾರುಕಟ್ಟೆ, ಬನಶಂಕರಿ, ಯಡಿಯೂರು ಹಾಗೂ ಗಾಂಧಿಬಜಾರ್‌ಗೆ ಸೋಮವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಕಸದ ರಾಶಿ ಕಂಡು ಅಸಮಾಧಾನ ವ್ಯಕ್ತಪಡಿಸಿದರು.

‘ನಗರದಲ್ಲಿ ಎಲ್ಲೂ ಕಸದ ರಾಶಿ ಇಲ್ಲದಿರುವಂತೆ ನೋಡಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಜನ ಪಾಲಿಕೆಯಿಂದ ಬಯಸುವುದೂ ಅದನ್ನೇ. ಹಬ್ಬ ಮುಗಿದು ನಾಲ್ಕೈದು ದಿನಗಳ ಬಳಿಕವೂ ಕಸ ತೆರವುಗೊಳಿಸಿಲ್ಲ ಎಂದರೆ ಏನರ್ಥ. ತಕ್ಷಣವೇ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದು ಗಂಗಾಂಬಿಕೆ ತಿಳಿಸಿದರು.

ADVERTISEMENT

‘ಮಂಗಳವಾರ ಬೆಳಿಗ್ಗೆ ಮತ್ತೆ ಕೆಲವು ಪ್ರದೇಶಗಳಿಗೆ ದಿಢೀರ್‌ ಭೇಟಿ ನೀಡಲಿದ್ದೇನೆ’ ಎಂದು ಮೇಯರ್‌ ತಿಳಿಸಿದರು.

‘ರಸ್ತೆ ಗುಂಡಿ ಮುಚ್ಚಲು ಕೈಜೋಡಿಸಿ’

‘ತಮ್ಮ ವಾರ್ಡ್‌ಗಳಲ್ಲಿ ಎಷ್ಟು ಕಡೆ ರಸ್ತೆ ಗುಂಡಿಗಳಿವೆ ಎಂಬ ಮಾಹಿತಿ ನೀಡಿ’ ಎಂದು ಮೇಯರ್‌ ಅವರು ಪಾಲಿಕೆ ಸದಸ್ಯರನ್ನು ಕೋರಿದ್ದಾರೆ.

ನಗರದ ರಸ್ತೆ ಗುಂಡಿಗಳನ್ನು ಮುಚ್ಚದ ಬಗ್ಗೆ ಹೈಕೋರ್ಟ್‌ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ. ರಸ್ತೆಗಳ ದುಸ್ಥಿತಿ ಬಗ್ಗೆ ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗುತ್ತಿದೆ.

‘ರಸ್ತೆ ಗುಂಡಿಗಳ ಬಗ್ಗೆ ಪಾಲಿಕೆ ಸದಸ್ಯರೇ ಮಾಹಿತಿ ನೀಡಿದರೆ, ತ್ವರಿತ ಗತಿಯಲ್ಲಿ ಸಮಸ್ಯೆ ಸರಿಪಡಿಸುವುದು ಸುಲಭವಾಗುತ್ತದೆ’ ಎಂದು ಮೇಯರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.