ADVERTISEMENT

ಯಲಹಂಕ: ದಸರಾ ಉತ್ಸವ–ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಗಮನ ಸೆಳೆದ ವಸ್ತುಪ್ರದರ್ಶನ, ದಾಂಡಿಯಾ ನೃತ್ಯ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 0:04 IST
Last Updated 28 ಸೆಪ್ಟೆಂಬರ್ 2025, 0:04 IST
ಸಹಕಾರನಗರದಲ್ಲಿ ಆಯೋಜಿಸಿರುವ ದಸರಾ ಉತ್ಸವದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿಗೆ ಮಹಿಳೆಯರು ಪೂಜೆ ನೆರವೇರಿಸಿದರು.
ಸಹಕಾರನಗರದಲ್ಲಿ ಆಯೋಜಿಸಿರುವ ದಸರಾ ಉತ್ಸವದಲ್ಲಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ದೇವಿಗೆ ಮಹಿಳೆಯರು ಪೂಜೆ ನೆರವೇರಿಸಿದರು.   
ದಸರಾ ಹಬ್ಬ ಧರ್ಮಾತೀತ: ಸಚಿವ ಕೃಷ್ಣ ಬೈರೇಗೌಡ | ಗೊಂಬೆ ಕೂಡ್ರಿಸಿದವರಿಗೆ ಉಡುಗೊರೆ | ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ

ಯಲಹಂಕ: ದಸರಾ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ, ಬದಲಿಗೆ ನಾಡಿನಲ್ಲಿರುವ ಎಲ್ಲ ಜಾತಿ, ಧರ್ಮದವರೂ ಒಗ್ಗಟ್ಟಾಗಿ ಆಚರಿಸುವ ಹಬ್ಬವಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.

ಕೆಬಿಜಿ ಸ್ವಯಂಸೇವಕರು ಮತ್ತು ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ʼಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ʼ ಸಹಯೋಗದೊಂದಿಗೆ ಸಹಕಾರನಗರದಲ್ಲಿ ಆಯೋಜಿಸಿರುವ ಎರಡು ದಿನಗಳ ದಸರಾ ಉತ್ಸವ-ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಒಂಬತ್ತು ದಿನ ನಡೆಯುವ ದಸರಾ ವಿಶಿಷ್ಟ ಹಬ್ಬವಾಗಿದೆ. ಒಂದೊಂದು ದಿನವೂ ಕಲೆ, ಸಾಹಿತ್ಯ, ಸಂಗೀತ ಜಾನಪದ ನೃತ್ಯ ಸೇರಿ ನಾಡಿನ ಎಲ್ಲಾ ಬಗೆಯ ಕಲಾ ಪ್ರಕಾರಗಳನ್ನೂ ಕೊಂಡಾಡಲಾಗುತ್ತದೆ. ಈ ಉತ್ಸವದಲ್ಲಿ ನಾಡಿನ ಎಲ್ಲಾ ಜಾತಿ-ಧರ್ಮದ ಜನರೂ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಸಮಾಜದ ಎಲ್ಲಾ ಬಗೆಯ ಜನರನ್ನೂ ಒಂದೆಡೆ ಸೇರಿಸುವ ಕೀರ್ತಿ, ನಾಡಹಬ್ಬ ದಸರಾಗೆ ಮಾತ್ರವಿದೆ. ಹೀಗಾಗಿ ಈ ಹಬ್ಬ ಧರ್ಮಾತೀತವಾದದ್ದು’ ಎಂದರು.

ADVERTISEMENT

‘ದಸರಾ ಹಬ್ಬವೆಂದರೆ ಗೊಂಬೆಗಳ ಪ್ರದರ್ಶನ. ಆದರೆ, ನಮ್ಮಜನರು ಈಗ ಈ ಹಳೆಯ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಹೀಗಾಗಿ ಭಾನುವಾರ ಬೆಳಗ್ಗೆಯಿಂದಲೇ ಗೊಂಬೆಗಳ ಪ್ರದರ್ಶನ ಇಟ್ಟವರ ಮನೆಗಳಿಗೆ ತೆರಳಿ ಉಡುಗೊರೆ ನೀಡಲಾಗುವುದು. ಈ ಮೂಲಕ ನಮ್ಮ ಸಂಪ್ರದಾಯ ಮುಂದಿನ ಪೀಳಿಗೆಗೂ ಉಳಿಯಲು ಪ್ರೇರೇಪಿಸಲಾಗುವುದು’ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ, ಕಾಂಗ್ರೆಸ್‌ ಮುಖಂಡರಾದ ಎನ್‌.ಎನ್‌.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಎನ್‌.ಕೆ.ಮಹೇಶ್‌ಕುಮಾರ್‌, ವಿ.ವಿ.ಪಾರ್ತಿಬರಾಜನ್‌, ವಿ.ಹರಿ, ಆರ್‌.ಎಂ.ಶ್ರೀನಿವಾಸ್‌, ಬಿ.ಎಸ್‌.ಗೋಪಾಲಕೃಷ್ಣ, ಶಾಂತಮ್ಮ, ಎಚ್‌.ಎ.ಶಿವಕುಮಾರ್‌, ಹನುಮಂತಿ, ಕೆ.ದಿಲೀಪ್‌ ಕುಮಾರ್‌, ರಾಮಶಂಕರ್‌ ಮತ್ತಿತರರು ಉಪಸ್ಥಿತರಿದ್ದರು.

ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿ, ಪ್ರಸಾದ ವಿತರಣೆ ಮಾಡಲಾಯಿತು. ಲಲಿತ ಸಹಸ್ರನಾಮ ಪಾರಾಯಣ, ದೇವರನಾಮ ಗಾಯನ, ದೃಷ್ಟಿ ಆರ್ಟ್‌ ಸೆಂಟರ್‌ನ ಅನುರಾಧಾ ವಿಕ್ರಾಂತ್‌ ತಂಡದಿಂದ ದುರ್ಗಾದೇವಿಯ ಒಂಬತ್ತು ಅವತಾರಗಳ ನೃತ್ಯನಾಟಕ ಹಾಗೂ ಸಹಕಾರನಗರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ದಾಂಡಿಯಾ ನೃತ್ಯ ಪ್ರಸ್ತುತಪಡಿಸಿದರು.

ವಸ್ತುಪ್ರದರ್ಶನ: 

ಗೃಹಪಯೋಗಿ ವಸ್ತುಗಳು, ಬಟ್ಟೆ, ಮಣ್ಣಿನ ಮಡಕೆ, ಪಿಒಪಿ ಬೊಂಬೆಗಳು, ಕೃತಕ ಆಭರಣಗಳು, ಅಲಂಕಾರಿಕ ವಸ್ತುಗಳು, ಸಿರಿಧಾನ್ಯಗಳು, ಸಾವಯವ ಪದಾರ್ಥಗಳು, ತಿಂಡಿ-ತಿನಿಸುಗಳೂ ಸೇರಿ 50ಕ್ಕೂ ಹೆಚ್ಚು ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.‌

ಸಹಕಾರನಗರದಲ್ಲಿ ಆಯೋಜಿಸಿರುವ ದಸರಾ ಉತ್ಸವದಲ್ಲಿ ದಸರಾ ಬೊಂಬೆಪ್ರದರ್ಶನ ಏರ್ಪಡಿಸಲಾಗಿದೆ.
ಸಮಾಜದ ಎಲ್ಲಾ ಬಗೆಯ ಜನರನ್ನೂ ಒಂದೆಡೆ ಸೇರಿಸುವ ಕೀರ್ತಿ, ನಾಡಹಬ್ಬ ದಸರಾಗೆ ಮಾತ್ರವಿದೆ. ಹೀಗಾಗಿ ಈ ಹಬ್ಬ ಧರ್ಮಾತೀತವಾದದ್ದು, ಈ ಉತ್ಸವದಲ್ಲಿ ನಾಡಿನ ಎಲ್ಲಾ ಜನರೂ ಪಾಲ್ಗೊಂಡು ಸಂಭ್ರಮಿಸುತ್ತಾರೆ
ಕೃಷ್ಣಬೈರೇಗೌಡ, ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.