ADVERTISEMENT

ದಾಸರಹಳ್ಳಿ ಸಮಸ್ಯೆ ಪರಿಶೀಲಿಸಿದ ಮುಖ್ಯ ಆಯುಕ್ತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 2:56 IST
Last Updated 16 ಅಕ್ಟೋಬರ್ 2021, 2:56 IST
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರ ಸಮಸ್ಯೆಯನ್ನು ಮುಖ್ಯ ಆಯುಕ್ತ ಗೌರವ್ ಗುಪ್ತ ಆಲಿಸಿದರು. ಶಾಸಕ ಆರ್.ಮಂಜುನಾಥ್ ಇದ್ದರು
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರ ಸಮಸ್ಯೆಯನ್ನು ಮುಖ್ಯ ಆಯುಕ್ತ ಗೌರವ್ ಗುಪ್ತ ಆಲಿಸಿದರು. ಶಾಸಕ ಆರ್.ಮಂಜುನಾಥ್ ಇದ್ದರು   

ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಆಗಿರುವ ಅನಾಹುತಗಳ ಬಗ್ಗೆ ಶಾಸಕ ಆರ್. ಮಂಜುನಾಥ್ ಅವರ ಜೊತೆಗೂಡಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಶುಕ್ರವಾರ ಪರಿಶೀಲನೆ ನಡೆಸಿದರು.

ಚೊಕ್ಕಸಂದ್ರ ಕೆರೆ ಸುತ್ತಮುತ್ತಲಿನ ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿದು ಹೋಗಲು ಸಾಧ್ಯವಾಗದ ಕಾರಣ ಬಡಾವಣೆಗಳಿಗೆ ನೀರು ನುಗ್ಗುತ್ತಿದೆ. ರಾಜಕಾಲುವೆಗೆ ಕಸ ಕಡ್ಡಿ ಸೇರಿಕೊಂಡು ನೀರು ಮುಂದೆ ಹರಿಯಲು ಸಾಧ್ಯವಾಗದೆ ಸಮಸ್ಯೆಯಾಗಿದೆ ಎಂದು ಗೌರವ್ ಗುಪ್ತ ಹೇಳಿದರು.

ನೀರು ಸರಾಗವಾಗಿ ಹರಿದು ಹೋಗಲು ಇರುವ ತಡೆಗಳನ್ನು ಸರಿಪಡಿಸಬೇಕು. ಕಾಲುವೆ ಹೂಳನ್ನು ಆಗಾಗ ತೆಗೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ರಾಯಲ್ ಎನ್‌ಕ್ಲೇವ್ ಮತ್ತು ಬಿಟಿಎಸ್ ಬಡಾವಣೆಗೂ ಭೇಟಿ ನೀಡಿ ಪ್ರದೇಶಕ್ಕೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ರಾಯಲ್ ಎನ್‌ಕ್ಲೇವ್ ಬಡಾವಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಚಿನಲ್ಲಿದ್ದು, ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆ ಉದ್ಭವಿಸುತ್ತಿದೆ. ತಾತ್ಕಾಲಿಕ ಚರಂಡಿ ನಿರ್ಮಿಸಿ ನೀರು ಹರಿದು ಹೋಗಲು ಅವಕಾಶ ಕಲ್ಪಿಸಬೇಕು ಎಂದು ಜಂಟಿ ಆಯುಕ್ತರಿಗೆ ನಿರ್ದೇಶನ ನೀಡಿದರು.

‘ಬಿಟಿಎಸ್ ಬಡಾವಣೆಯಲ್ಲಿ ಯೋಜನಾ ಬದ್ಧವಾಗಿ ಮನೆಗಳನ್ನು ನಿರ್ಮಿಸಿಲ್ಲ. ರಾಜಕಾಲುವೆ ಒತ್ತುವರಿ ಆಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ನಿಯಮ ಉಲ್ಲಂಘಿಸಿ ಮನೆಗಳನ್ನು ನಿರ್ಮಾಣ ಮಾಡಿರುವುದರಿಂದ ಸಮಸ್ಯೆಗಳು ಹೆಚ್ಚಾಗಿವೆ’ ಎಂದು ಸಾರ್ವಜನಿಕರು ದೂರಿದರು.

ಪರಿಶೀಲನೆ ನಡೆಸಿದ ಮುಖ್ಯ ಆಯುಕ್ತರು, ನೀರು ಹರಿಯಲು ಅಡ್ಡಿಯಾಗಿ ಯಾರೇ ತಡೆಗೋಡೆಗಳನ್ನು ನಿರ್ಮಿಸಿದ್ದರೂ ತೆರವುಗೊಳಿಸುವಂತೆ ಜಂಟಿ ಆಯುಕ್ತರಿಗೆ ಆದೇಶಿಸಿದರು.

ದಾಸರಹಳ್ಳಿ ವಲಯ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ತುರ್ತು ಕಾಮಗಾರಿ ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.