
ಬೆಂಗಳೂರು: ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್ ಅಧ್ಯಯನದ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಮತ್ತು ಸೃಜನಶೀಲತೆಯನ್ನು ಒರೆಗೆ ಹಚ್ಚುವ ಮೂರು ದಿನಗಳ ‘ದಾಸ್ತಾನ್–2025 ಟೆಕ್ ಫೆಸ್ಟ್’ ಮುಕ್ತಾಯವಾಯಿತು.
‘ಶಿಕ್ಷಣವು ಜ್ಞಾನ, ಕರುಣೆ ಮತ್ತು ಸಾಮಾಜಿಕ ಜವಾಬ್ದಾರಿ ಒಟ್ಟುಗೂಡಿಸುವ ಮಾಧ್ಯಮ’ ಎಂಬ ಸಂದೇಶದೊಂದಿಗೆ ಅಮೃತ ವಿಶ್ವವಿದ್ಯಾಪೀಠಂ ವತಿಯಿಂದ ಬೆಂಗಳೂರು ನಗರದ ಕ್ಯಾಂಪಸ್‌ನಲ್ಲಿ ನಡೆದ ಈ ಉತ್ಸವದಲ್ಲಿ ದೇಶದ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಅವರಿಗೆ ತಮ್ಮ ತಾಂತ್ರಿಕ ಜ್ಞಾನ ಮತ್ತು ಸಮಸ್ಯೆಗಳ ಪರಿಹಾರ ಕಲ್ಪಿಸುವ ಮತ್ತು ಅವರ ಕೌಶಲ್ಯ ಪ್ರದರ್ಶಿಸಲು ಇದು ಅನುವು ಮಾಡಿಕೊಟ್ಟಿತು.
‘ನಿಯೋ ಟೆರ್ರಾ–ಎ ನ್ಯೂ ವರ್ಲ್ಡ್’ ಎಂಬ ವಿಷಯವಸ್ತುವನ್ನು ಒಳಗೊಂಡ ದಾಸ್ತಾನ್–2025ರಲ್ಲಿ, ಪ್ರಾತ್ಯಕ್ಷಿಕೆ, ಹ್ಯಾಕಥಾನ್‌ಗಳ ವೈವಿಧ್ಯಮಯ ಸರಣಿ ಸ್ಪರ್ಧೆ ನಡೆದವು. ‘ಹ್ಯಾಕ್ ಯುವರ್ ಲೈಫ್’ ಹ್ಯಾಕಥಾನ್ ಮತ್ತು ‘ಚೈನ್ ರಿಯಾಕ್ಷನ್ ಚಾಲೆಂಜ್’ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಿ ದೈನಂದಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು.
‘ಪಿಕ್ಸೆಲ್ಸ್ ಅಂಡ್ ಪರ್ಸ್ಪೆಕ್ಟಿವ್ಸ್’ ವರ್ಕ್‌ಶಾಪ್‌ನಲ್ಲಿ ಅಂತರರಾಷ್ಟ್ರೀಯ ತಜ್ಞರು ಛಾಯಾಗ್ರಹಣದ ತಾಂತ್ರಿಕ ಮತ್ತು ಕಲೆಯ ಅಂಶಗಳ ಕುರಿತು ತರಬೇತಿ ನೀಡಿದರು. ಜನಪ್ರಿಯ ರೋಬೋ ವಾರ್ಸ್ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮತ್ತು ಅನ್ಯ ರಾಜ್ಯಗಳಿಂದ ಬಂದ ತಂಡಗಳು ತಮ್ಮ ಅತ್ಯಾಧುನಿಕ ರೋಬೊಟಿಕ್ ವಿನ್ಯಾಸ ಹಾಗೂ ನಿಯಂತ್ರಣ ಕೌಶಲ್ಯವನ್ನು ಪ್ರದರ್ಶಿಸಿದವು. ಉತ್ಸವದ ನೇತೃತ್ವವನ್ನು ಸ್ವಾಮಿ ನಿಷ್ಕಾಮಾಮೃತ ಚೈತನ್ಯ ವಹಿಸಿದ್ದರು. ಹಿನ್ನೆಲೆ ಗಾಯಕ ಕಾರ್ತಿಕ್ ಅಂತಿಮ ದಿನ ಸಂಗೀತ ಸಂಜೆ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.