ADVERTISEMENT

ರಂಜಾನ್: ಖರ್ಜೂರಕ್ಕಿಲ್ಲ ಕಿಮ್ಮತ್ತು

ಲಾಕ್‍ಡೌನ್‍ನಿಂದ ಶೇ 90ರಷ್ಟು ವ್ಯಾಪಾರ ಕುಸಿತ

ಮನೋಹರ್ ಎಂ.
Published 24 ಮೇ 2020, 18:38 IST
Last Updated 24 ಮೇ 2020, 18:38 IST
ಖರ್ಜೂರ
ಖರ್ಜೂರ   
""

ಬೆಂಗಳೂರು:ರಂಜಾನ್ ಬಂತೆಂದರೆ ಖರ್ಜೂರಕ್ಕೆ ಎಲ್ಲಿಲ್ಲದ ಬೇಡಿಕೆ. ಮುಸ್ಲಿಮರು ದಿನದ ಉಪವಾಸ ಮುಗಿಸುವುದೇ ಖರ್ಜೂರ ಸೇವಿಸುವ ಮೂಲಕ. ಈ ವ್ರತಾಚರಣೆ ವೇಳೆ ದಾಖಲೆ ಪ್ರಮಾಣದಲ್ಲಿ ಖರ್ಜೂರ ವಹಿವಾಟು ನಡೆಯುತ್ತಿತ್ತು. ಆದರೆ ಇದಕ್ಕೆ ಈ ಬಾರಿ ಲಾಕ್‍ಡೌನ್ ಪೆಟ್ಟು ನೀಡಿದೆ. ಈ ಬಾರಿ ಸರಳವಾಗಿ ರಂಜಾನ್ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಖರ್ಜೂರ ವ್ಯಾಪಾರ ಶೇ 90ರಷ್ಟು ಕುಸಿದಿದೆ.

ಶಿವಾಜಿನಗರ, ರಸೆಲ್ ಮಾರುಕಟ್ಟೆ, ಯಶವಂತಪುರ ಎಪಿಎಂಸಿ ಮಾರುಕಟ್ಟೆ, ಹಳೇ ತರಗುಪೇಟೆ, ಹೊಸ ತರಗುಪೇಟೆಗಳಲ್ಲಿ ಖರ್ಜೂರ ಸಗಟು ವ್ಯಾಪಾರ ನಡೆಯುತ್ತದೆ. ಆದರೆ, ಲಾಕ್‍ಡೌನ್‍ನಿಂದ ಈ ಬಾರಿ ವಿದೇಶಗಳಿಂದ ಬಗೆಬಗೆಯ ಖರ್ಜೂರ ಆಮದಾಗಿಲ್ಲ.

ಮೊಹಮದ್ ಇದ್ರಿಸ್

'ರಂಜಾನ್ ವೇಳೆ ರಸೆಲ್ ಮಾರುಕಟ್ಟೆಯಲ್ಲಿ ಖರ್ಜೂರ ಹಾಗೂ ಒಣ ಹಣ್ಣುಗಳ ಮೇಳ ನಡೆಯುತ್ತಿತ್ತು. ಮುಸ್ಲಿಂ ಸಮುದಾಯದವರು ಖರ್ಜೂರ ಖರೀದಿಗೆ ಇಲ್ಲಿನ ಅಂಗಡಿಗಳಿಗೆ ಮುಗಿಬೀಳುತ್ತಿದ್ದರು. ಹಬ್ಬಕ್ಕೂ ಒಂದು ತಿಂಗಳ ಮುಂಚೆಯೇ ಕೆಲವರು ವಿದೇಶಗಳಿಂದ ತರಿಸುವ ಖರ್ಜೂರಗಳಿಗೆ ಮುಂಗಡವಾಗಿ ಬೇಡಿಕೆ ಇಡುತ್ತಿದ್ದರು. ಆದರೆ, 35 ವರ್ಷಗಳಲ್ಲೇ ಈ ರಂಜಾನ್ ಕರಾಳ ಅನುಭವ ನೀಡಿದೆ' ಎಂದು ರಸೆಲ್ ಮಾರ್ಕೆಟ್ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇದ್ರೀಸ್ ಚೌಧರಿ ಬೇಸರ ವ್ಯಕ್ತಪಡಿಸಿದರು.

ADVERTISEMENT

'ಮಸೀದಿಗಳಲ್ಲಿ ಎಂದಿನಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಮದರಸಾಗಳಲ್ಲಿ ಬೋಧನೆ ನಿಂತಿದೆ. ಶೇ 90ರಷ್ಟು ಖರ್ಜೂರ ವಿದೇಶಗಳಿಂದ ಬರಲಿಲ್ಲ. ಕೆಂಪು ವಲಯದಲ್ಲಿರುವ ಕಾರಣ ರಸೆಲ್ ಮಾರುಕಟ್ಟೆಯನ್ನು ಮೂರು ತಿಂಗಳಿನಿಂದ ಮುಚ್ಚಲಾಗಿದೆ. ಬೇರೆ ಅಂಗಡಿಗಳಲ್ಲಿ ಖರ್ಜೂರದ ದರ ಕಡಿಮೆ ಇದೆ. ಆದರೂ ಕೊಳ್ಳುವವರಿಲ್ಲ. ಅಂಗಡಿಗೆ ಪ್ರತಿನಿತ್ಯ ಕನಿಷ್ಠ 100 ಮಂದಿ ಗ್ರಾಹಕರು ಬರುತ್ತಿದ್ದರು. ದಿನಕ್ಕೆ ₹1 ಲಕ್ಷ ವಹಿವಾಟು ನಡೆಯುತ್ತಿತ್ತು. ಈ ಬಾರಿ ₹ 20 ಲಕ್ಷದವರೆಗೆ ನಷ್ಟ ಅನುಭವಿಸುವಂತಾಗಿದೆ' ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.