ADVERTISEMENT

ಕರ್ತವ್ಯಕ್ಕೆ ಹಾಜರಾಗದ ಬಿಎಲ್ಒಗಳ ವಿರುದ್ಧ ಕ್ರಮಕ್ಕೆ ಸೂಚನೆ

ಪಶ್ಚಿಮ ವಲಯ: ಕೋವಿಡ್ ನಿಯಂತ್ರಣ– ಸನ್ನದ್ಧತೆ ಪರಿಶೀಲಿಸಿದ ಡಿಸಿಎಂ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 20:08 IST
Last Updated 1 ಆಗಸ್ಟ್ 2020, 20:08 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು: ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಕೋವಿಡ್ ನಿಯಂತ್ರಣ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಆದೇಶ ಮಾಡಿದರು.

ಬಿಬಿಎಂಪಿ ಪಶ್ಚಿಮ ವಲಯದ ಕೋವಿಡ್ ನಿಯಂತ್ರಣದ ಸನ್ನದ್ಧತೆಯನ್ನು ಅವರು ಶನಿವಾರ ಪರಿಶೀಲಿಸಿದರು. ‘ಈ ವಲಯದಲ್ಲಿ ಒಟ್ಟು 7 ಸಾವಿರ ಬೂತ್ ಮಟ್ಟದ ಅಧಿಕಾರಿಗಳಿದ್ದು, ಕೇವಲ 1,200 ಅಧಿಕಾರಿಗಳಷ್ಟೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಉಳಿದವರು ಎಲ್ಲಿ’ ಎಂದು ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಬೂತ್ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕಿಯರ ಜೊತೆ ಸೇರಿ ಕೋವಿಡ್ ಸೋಂಕಿತರನ್ನು ಸಂಪರ್ಕಿಸುವುದು, ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡುವುದೂ, ಜಾಗೃತಿ ಮೂಡಿಸುವುದು ಬಿಎಲ್ಒಗಳ ಕೆಲಸ. ಕರ್ತವ್ಯ ಲೋಪವೆಸಗಿರುವುದನ್ನು ಸೇವಾ ದಾಖಲಾತಿಯಲ್ಲಿ ಈ ದಾಖಲಿಸಿ ಎಂದು ಸಭೆಯಲ್ಲಿ ಹಾಜರಿದ್ದ ಪಶ್ಚಿಮ ವಿಭಾಗದ ಕೋವಿಡ್ ಉಸ್ತುವಾರಿ ಅಧಿಕಾರಿ ಉಜ್ವಲ್’ಕುಮಾರ್ ಘೋಷ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರಾದ ಡಿ.ರಂದೀಪ್ ಹಾಗೂ ಡಾ. ಬಸವರಾಜು ಅವರಿಗೆ ಸೂಚನೆ ನೀಡಿದರು

ADVERTISEMENT

ಕೋವಿಡ್ ಹಿನ್ನೆಲೆಯಲ್ಲಿ ಹೊಸದಾಗಿ ನೇಮಕವಾಗುತ್ತಿರುವ ಗುತ್ತಿಗೆ ವೈದ್ಯರಿಗೆ ತಿಂಗಳಿಗೆ ₹ 80 ಸಾವಿರ ವೇತನ ನಿಗದಿಪಡಿಸಲಾಗಿದೆ ಮಾಡಲಾಗಿದೆ. ಈಗಾಗಲೇಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ತಿಂಗಳಿಗೆ ₹ 60 ಸಾವಿರ ವೇತನ ನೀಡಲಾಗುತ್ತಿದೆ. ಅವರಿಗೆ ತಿಂಗಳಿಗೆ ₹ 20 ಸಾವಿರ ಕೋವಿಡ್ ಭತ್ಯೆ ಸೇರಿಸಿ ಒಟ್ಟು ₹ 80 ಸಾವಿರ ವೇತನ ನೀಡುವಂತೆ ಹಾಗೂಆರೋಗ್ಯ ಸಹಾಯಕಿಯರಿಗೆ ವೇತನದ ಜತೆಗೆ ₹ 5 ಸಾವಿರ ಕೋವಿಡ್ ಭತ್ಯೆ ನೀಡಲು ಉಪ ಮುಖ್ಯಮಂತ್ರಿ ಸೂಚನೆ ನೀಡಿದರು.

ಕೋವಿಡ್ ಯೋಧರಾಗಿ ಕೆಲಸ ಮಾಡುತ್ತಿರುವ ಸ್ವಯಂಸೇವಕರಿಗೆ, ಗಂಟಲು ದ್ರವ ಸಂಗ್ರಹಿಸುವ ಲ್ಯಾಬ್ ಟೆಕ್ನಿಷಿಯನ್‌ಗಳಿಗೆ ಕೋವಿಡ್ ಭತ್ಯೆ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುವಂತೆ ಸಲಹೆ ನೀಡಿದರು.

ಸಾವುಗಳ ಬಗ್ಗೆ ವರದಿ:

ಇತ್ತೀಚೆಗೆ ಹೆಚ್ಚುತ್ತಿರುವ ಸಾವುಗಳಿಗೆ ನಿಜಕ್ಕೂ ಕೋವಿಡ್ ಕಾರಣವೇ? ಸೋಂಕು ತಗುಲಿದ ಮೇಲೆ ತಡವಾಗಿ ಚಿಕಿತ್ಸೆ ಪಡೆದಿದ್ದರಿಂದ ಸಾವುಗಳಾಗುತ್ತಿವೆಯೇ ಅಥವಾ ಬೇರೆ ಕಾಯಿಲೆಯಿಂದ ಅವರು ಮೃತಪಟ್ಟಿದ್ದರೇ ಎಂಬ ಬಗ್ಗೆ ವಿಶ್ಲೇಷಣೆ ನಡೆಸಿ ವರದಿ ನೀಡುವಂತೆ ಹೇಳಿದರು.

ಪಾಲಿಕೆಯ ದಾರಿ ತಪ್ಪಿಸುತ್ತಿರುವ ಖಾಸಗಿ ಆಸ್ಪತ್ರೆಗಳು

ತಮ್ಮಲ್ಲಿರುವ ಲಭ್ಯ ಇರುವ ಖಾಲಿ ಹಾಸಿಗೆಗಳು ಹಾಗೂ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳ ಕ್ಷಣಕ್ಷಣದ ಮಾಹಿತಿಯನ್ನು ಖಾಸಗಿ ಆಸ್ಪತ್ರೆಗಳು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುತ್ತವೆ. ಈ ವೇಳೆ ಕೋವಿಡ್’ಗೆ ಮೀಸಲಾದ ಹಾಸಿಗೆಗಳು ಖಾಲಿ ಇವೆ ಎಂದು ಮಾಹಿತಿ ನೀಡುತ್ತಿವೆ. ಆದರೆ, ಪಾಲಿಕೆ ವೈದ್ಯರು ಕೋವಿಡ್ ರೋಗಿಗಳನ್ನು ಆ ಆಸ್ಪತ್ರೆಗಳಿಗೆ ಕಳಿಸಿದಾಗ ‘ನಮ್ಮಲ್ಲಿ ಹಾಸಿಗೆ ಖಾಲಿ ಇಲ್ಲ’ ಎಂದು ರೋಗಿಗಳನ್ನು ವಾಪಸ್ ಕಳಿಸುತ್ತಿವೆ. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.

ಇಂಥ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉಪ ಮುಖ್ಯಮಂತ್ರಿ ಸೂಚಿಸಿದರು.

‘ನಗರದಲ್ಲಿರುವ ಸುಮಾರು 400ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ತಲಾ ಒಬ್ಬರಂತೆ ’ಆಪ್ತಮಿತ್ರ’ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅವರು ಹಿರಿಯ ಅಧಿಕಾರಿಗಳ ಜೊತೆ ಇಂಥ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು. ಅವು ದಾರಿ ತಪ್ಪಿಸುವುದು ಕಂಡುಬಂದರೆ ತಕ್ಷಣ ಕ್ರಮ ಜರುಗಿಸಬೇಕು. ನಿಮ್ಮ ಜತೆ ಸರಕಾರವಿದೆ’ ಎಂದು ಡಿಸಿಎಂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.