ADVERTISEMENT

ಎಫ್‌ಐಆರ್‌: ತಕ್ಷಣವೇ ಮಾಹಿತಿ ನೀಡಲು ಸೂಚನೆ

ಡಿಸಿಆರ್‌ಇ ವಿಶೇಷ ಪೊಲೀಸ್‌ ಠಾಣೆ: ಕಾರ್ಯನಿರ್ವಹಣೆ ಕುರಿತು ಪತ್ರ ಬರೆದ ಡಿಜಿ–ಐಜಿಪಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 15:39 IST
Last Updated 14 ಜುಲೈ 2025, 15:39 IST
   

ಬೆಂಗಳೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ವಿಶೇಷ ಪೊಲೀಸ್‌ ಠಾಣೆ ಮಾನ್ಯತೆ ಲಭಿಸಿದ್ದು, ಹೊಸದಾಗಿ ಸ್ಥಾಪಿಸಿರುವ 33 ಪೊಲೀಸ್‌ ಠಾಣೆಗಳ ಕಾರ್ಯನಿರ್ವಹಣೆ ಕುರಿತು ಘಟಕದ ಮುಖ್ಯಸ್ಥರಿಗೆ (ಎಸ್‌.ಪಿ ಅಥವಾ ನಗರ ಪೊಲೀಸ್‌ ಕಮಿಷನರ್‌) ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಪತ್ರ ಬರೆದಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ನಿಯಮಗಳು–1995ರ ನಿಯಮ 7ರಂತೆ ಒಬ್ಬ ತನಿಖಾಧಿಕಾರಿಯನ್ನು ಘಟಕದ ಮುಖ್ಯಸ್ಥರು ನೇಮಿಸಬೇಕು. ಎಫ್‌ಐಆರ್ ನೋಂದಣಿ ಮಾಹಿತಿ ದೊರೆತ ತಕ್ಷಣವೇ  ಪ್ರಧಾನ ಕಚೇರಿಗೂ ಮಾಹಿತಿ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎಸ್‌ಡಿಪಿಒಗಳು ನಡೆಸುತ್ತಿದ್ದ ದೌರ್ಜನ್ಯ ಪ್ರಕರಣಗಳ ತನಿಖೆಯನ್ನು ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ಹಸ್ತಾಂತರ ಮಾಡಲಾಗಿದೆ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಯಾವುದೇ ವ್ಯಕ್ತಿಯಿಂದ ಅಕ್ರಮದ ಬಗ್ಗೆ ದೂರನ್ನು ಸ್ವೀಕರಿಸಿದಾಗ ಆಯಾ ವ್ಯಾಪ್ತಿಯ ಪೊಲೀಸ್‌ ಠಾಣೆಯ ಪ್ರಭಾರದಲ್ಲಿರುವ ಅಧಿಕಾರಿಯು ವಿಳಂಬ ಮಾಡದೇ ಎಫ್‌ಐಆರ್ ದಾಖಲಿಸಿಕೊಳ್ಳಬೇಕು. ಪ್ರಕರಣ ದಾಖಲಾದ ಮೇಲೆ ಪ್ರಕರಣದ ಸಂಪೂರ್ಣ ವಿವರಗಳಿರುವ ತುರ್ತು ವರದಿಯನ್ನು ತಮ್ಮ ಘಟಕದ ಮುಖ್ಯಸ್ಥರಿಗೆ, ಸಂಬಂಧಿತ ಡಿಸಿಆರ್‌ಇ ಪೊಲೀಸ್‌ ಠಾಣೆಗೆ ಹಾಗೂ ಡಿಸಿಆರ್‌ಇ ನಿಯಂತ್ರಣ ಕೊಠಡಿಗೆ ಕಳುಹಿಸಬೇಕು. ವರದಿಯ ಪ್ರತಿಯನ್ನು ಪೊಲೀಸ್ ಪ್ರಧಾನ ಕಚೇರಿ ಹಾಗೂ ಸಂಬಂಧಿತ ವಲಯಾಧಿಕಾರಿಗೆ ನಕಲು ರೂಪದಲ್ಲಿ ಕಳುಹಿಸಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.‌

ADVERTISEMENT

ಸಂತ್ರಸ್ತ ತಮ್ಮ ಅಹವಾಲನ್ನು ಸಾಮಾನ್ಯ ಪೊಲೀಸ್‌ ಠಾಣೆಗೆ ನೀಡಿದಾಗ ಪ್ರಭಾರದಲ್ಲಿರುವ ಅಧಿಕಾರಿ, ಆ ಅರ್ಜಿಯನ್ನು ವೈಯಕ್ತಿವಾಗಿ ಪರಿಶೀಲಿಸಬೇಕು. ಮುಂದಿನ ಕ್ರಮಕ್ಕೆ ಡಿಸಿಆರ್‌ಇ ಪೊಲೀಸ್‌ ಠಾಣೆಗೆ ರವಾನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳ ಬಗ್ಗೆ ಘಟಕಾಧಿಕಾರಿಗಳು ಪೊಲೀಸ್ ಪ್ರಧಾನ ಕಚೇರಿ ಮತ್ತು ಡಿಸಿಆರ್‌ಇ ಮುಖ್ಯ ಕಚೇರಿಗೆ ನಿರಂತರವಾಗಿ ಮಾಹಿತಿ ಹಂಚಿಕೊಳ್ಳಬೇಕು ಎಂದು ಸಲೀಂ ಅವರು ನಿರ್ದೇಶನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.