ADVERTISEMENT

’ವ್ಯಸನಮುಕ್ತ ದಿನ’ ಮಾಸಾಚರಣೆಯಾಗಲಿ: ಎ.ಶ್ರೀಧರ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 14:11 IST
Last Updated 1 ಆಗಸ್ಟ್ 2025, 14:11 IST
ವ್ಯಸನಮುಕ್ತ ದಿನಾಚರಣೆಯಲ್ಲಿ ಚಿತ್ತರಗಿ ಇಳಕಲ್ ಶ್ರೀವಿಜಯ ಮಹಾಂತೇಶ್ವರ ಸಂಸ್ಥಾನದ ಪೀಠಾಧ್ಯಕ್ಷ ಗುರುಮಹಾಂತ ಸ್ವಾಮೀಜಿ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಗಾಟಿಸಿದರು. ಎ. ಶ್ರೀಧರ, ಎಂ.ಸಿ. ನರೇಂದ್ರ, ಎನ್.ಎಸ್. ಮಹೇಶ್, ಅಭಿದಾ ಬೇಗಂ ಉಪಸ್ಥಿತರಿದ್ದರು 
ವ್ಯಸನಮುಕ್ತ ದಿನಾಚರಣೆಯಲ್ಲಿ ಚಿತ್ತರಗಿ ಇಳಕಲ್ ಶ್ರೀವಿಜಯ ಮಹಾಂತೇಶ್ವರ ಸಂಸ್ಥಾನದ ಪೀಠಾಧ್ಯಕ್ಷ ಗುರುಮಹಾಂತ ಸ್ವಾಮೀಜಿ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಗಾಟಿಸಿದರು. ಎ. ಶ್ರೀಧರ, ಎಂ.ಸಿ. ನರೇಂದ್ರ, ಎನ್.ಎಸ್. ಮಹೇಶ್, ಅಭಿದಾ ಬೇಗಂ ಉಪಸ್ಥಿತರಿದ್ದರು    

ಬೆಂಗಳೂರು: ‘ಜೋಳಿಗೆ ಹಿಡಿದು ದುಶ್ಚಟವನ್ನು ಇದರಲ್ಲಿ ಹಾಕಿ ಎಂದು ಹೇಳಿದ ಮಹಂತ ಶಿವಯೋಗಿ ಸ್ವಾಮೀಜಿ ಅವರ ಜನ್ಮದಿನದ ಪ್ರಯುಕ್ತ ನಡೆಯುತ್ತಿರುವ ಒಂದು ದಿನದ ‘ವ್ಯಸನಮುಕ್ತ’ ಆಚರಣೆ, ಆಗಸ್ಟ್‌ ತಿಂಗಳು ಪೂರ್ತಿ ನಡೆಯುವ ಮೂಲಕ ‘ಮಾಸಾಚರಣೆ’ ಆಗಬೇಕು’ ಎಂದು ಮನೋವಿಜ್ಞಾನಿ ಎ. ಶ್ರೀಧರ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಚಿತ್ತರಗಿ ಇಳಕಲ್‌ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ‘ವ್ಯಸನಮುಕ್ತ ದಿನಾಚರಣೆ’ಯಲ್ಲಿ ಅವರು ಉಪನ್ಯಾಸ ನೀಡಿದರು.

‘ಅಮೆರಿಕ, ಯೂರೋಪ್‌ನಲ್ಲಿ ಕ್ರಿಸ್‌ಮಸ್‌ ನಂತರ ಜನವರಿ ತಿಂಗಳನ್ನು ‘ಡ್ರೈ ಜನವರಿ’ ಎಂದು ಆಚರಿಸುತ್ತಾರೆ. ಆ ತಿಂಗಳು ಪೂರ್ತಿ ಮದ್ಯ ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಾರೆ. 30–35 ದಿನಗಳು ಮದ್ಯದಿಂದ ದೂರವಿದ್ದರೆ, ವ್ಯಸನಮುಕ್ತರಾಗಲು ಸಾಧ್ಯವಿದೆ. ಕಾನೂನು, ನೀತಿ–ನಿಯಮಗಳಿಗಿಂತ ಇಂಥ ಸ್ವಯಂ ನಿಯಂತ್ರಣದಿಂದಲೇ ವ್ಯಸನಮುಕ್ತರಾಗಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ‘ಮಹಾಂತ ಶಿವಯೋಗಿಗಳ ಜಯಂತಿಯನ್ನು ಸರ್ಕಾರ ‘ವ್ಯಸನಮುಕ್ತ’ ದಿನವನ್ನಾಗಿ ಆಚರಿಸುತ್ತಿದೆ. ಈ ಕಾರ್ಯಕ್ರಮ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುವಂತಾಗಬೇಕು’ ಎಂದು ಸಲಹೆ ನೀಡಿದರು.

ಚಿತ್ತರಗಿ ಇಳಕಲ್‌ ವಿಜಯಮಹಾಂತೇಶ್ವರ ಸಂಸ್ಥಾನದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ‘ವ್ಯಸನಕ್ಕೆ ದಾಸರಾಗಿರುವವರಿಗೆ ಮಹಾಂತ ಶಿವಯೋಗಿಗಳ ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನುಂ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ಎನ್.ಎಸ್.ಮಹೇಶ್, ಗಾಂಧಿ ಸ್ಮಾರಕ ನಿಧಿಯ ಕೋಶಾಧಿಕಾರಿ ಎಚ್.ಬಿ.ದಿನೇಶ್, ಗಾಂಧಿ ಭವನದ ಕಾರ್ಯದರ್ಶಿ ಎಂ.ಸಿ.ನರೇಶ್, ಸದಸ್ಯೆ ಅಬಿದಾ ಬೇಗಂ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು ಮತ್ತು ಕಾರ್ಯಕ್ರಮದ ಅತಿಥಿಗಳು ಮೌರ್ಯ ವೃತ್ತದಿಂದ ಗಾಂಧಿ ಭವನದವರೆಗೆ ಜಾಗೃತಿ ಜಾಥಾ ನಡೆಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಾದಕವಸ್ತು ವಿರೋಧಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.