ADVERTISEMENT

ಮದುವೆ ಆಗುವುದಾಗಿ ಹೇಳಿ ಮೋಸ: 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ!

ಮದುವೆ ಆಗುವುದಾಗಿ ಹೇಳಿ ಮೋಸ, ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 16:09 IST
Last Updated 28 ಫೆಬ್ರುವರಿ 2024, 16:09 IST
ನರೇಶ್‌ಪುರಿ ಗೋಸ್ವಾಮಿ
ನರೇಶ್‌ಪುರಿ ಗೋಸ್ವಾಮಿ   

ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆ ಸೃಷ್ಟಿಸಿ, ಪತಿಯಿಲ್ಲದ ಹಾಗೂ ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿ ಮದುವೆ ಆಗುವುದಾಗಿ ನಂಬಿಸಿ ಸಾವಿರಾರು ರೂಪಾಯಿ ಪಡೆದು ವಂಚಿಸುತ್ತಿದ್ದ ಬಟ್ಟೆ ಅಂಗಡಿಯೊಂದರ ಕೆಲಸಗಾರನನ್ನು ರೈಲ್ವೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಾಟನ್‌ಪೇಟೆ ನಿವಾಸಿ ನರೇಶ್‌ಪುರಿ ಗೋಸ್ವಾಮಿ(47) ಬಂಧಿತ ಆರೋಪಿ.

‘ಆರೋಪಿಯು ಎರಡು ವರ್ಷಗಳಿಂದ ರಾಜ್ಯದ 17 ಮಹಿಳೆಯರೂ ಸೇರಿದಂತೆ ಬೇರೆ ಬೇರೆ ರಾಜ್ಯಗಳ 250ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಚಾಟಿಂಗ್ ನಡೆಸಿ ವಂಚಿಸಿರುವುದು ಪೊಲೀಸ್‌ ತನಿಖೆ ವೇಳೆ ಗೊತ್ತಾಗಿದೆ’ ಎಂದು ರೈಲ್ವೆ ಪೊಲೀಸ್ ವಿಭಾಗದ ಡಿಐಜಿಪಿ ಎಸ್.ಡಿ.ಶರಣಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ರಾಜಸ್ಥಾನದ 56, ಉತ್ತರಪ್ರದೇಶದ 32, ದೆಹಲಿಯ 32, ಮಧ್ಯಪ್ರದೇಶದ 16, ಮಹಾರಾಷ್ಟ್ರದ 13, ಗುಜರಾತ್‌ನ 11, ತಮಿಳುನಾಡಿನ 6, ಬಿಹಾರ ಮತ್ತು ಜಾರ್ಖಂಡ್‌ನ 5, ಆಂಧ್ರಪ್ರದೇಶದ ಇಬ್ಬರು ಮಹಿಳೆಯರನ್ನು ಮದುವೆ ಆಗುವುದಾಗಿ ವಂಚಿಸಿದ್ದಾನೆ’ ಎಂದು ವಿವರಿಸಿದರು.

‘ನಗರದ ರೈಲ್ವೆ ನಿಲ್ದಾಣಕ್ಕೆ ಕೊಯಮತ್ತೂರಿನ ಮಹಿಳೆಯೊಬ್ಬರ ಪೋಷಕರನ್ನು ಕರೆಸಿಕೊಂಡು ಸುಳ್ಳು ಹೇಳಿ ದುಡ್ಡು ಪಡೆದು ವಂಚಿಸಿದ್ದ. ಅವರು ನೀಡಿದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಮಾಹಿತಿ ನೀಡಿದರು.

‘ರಾಜಸ್ಥಾನದ ಆರೋಪಿ 20 ವರ್ಷಗಳಿಂದ ಕಾಟನ್‌ಪೇಟೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈತನ ಪತ್ನಿ, ಮಕ್ಕಳು ರಾಜಸ್ಥಾನದಲ್ಲೇ ನೆಲೆಸಿದ್ದಾರೆ. ವೆಬ್‌ಸೈಟ್‌ನಲ್ಲಿ ಅವಿವಾಹಿತ ಎಂದು ನಕಲಿ ಖಾತೆ ಸೃಷ್ಟಿಸಿಕೊಂಡಿದ್ದ. ಸಾಫ್ಟ್‌ವೇರ್‌ ಎಂಜಿನಿಯರ್‌ ಎಂದು ಹೇಳಿಕೊಳ್ಳುತ್ತಿದ್ದ. ಯಾರಾದರೂ ತನ್ನ ಬಗ್ಗೆ ವಿಚಾರಣೆ ನಡೆಸಿದರೆ ಮಾಧ್ಯಮ ಪ್ರತಿನಿಧಿ ಹಾಗೂ ಮಾಧ್ಯಮ ಸಂಸ್ಥೆಯೊಂದರ ಉಪಾಧ್ಯಕ್ಷ ಎಂದೂ ಹೇಳಿಕೊಳ್ಳುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಬೇರೆಯವರ ಹೆಸರಿನಲ್ಲಿ 2 ಸಿಮ್ ಕಾರ್ಡ್, ಮೊಬೈಲ್‌ ಅನ್ನು ಕಾಳಸಂತೆಯಲ್ಲಿ ಖರೀದಿಸಿದ್ದ. ಈ ಮೊಬೈಲ್ ನಂಬರ್‌ ಬಳಸಿಕೊಂಡು ಮ್ಯಾಟ್ರಿಮೋನಿಯಲ್‌ನಲ್ಲಿ ನಕಲಿ ಹೆಸರು, ಫೋಟೊ, ಹುದ್ದೆ ಉಲ್ಲೇಖಿಸಿ ಪ್ರೊಫೈಲ್ ಸೃಷ್ಟಿಸಿದ್ದ. ವಿಚ್ಛೇದಿತರನ್ನು ವಿವಾಹ ಆಗುವುದಾಗಿ ಹೇಳಿಕೊಂಡಿದ್ದ. ಕೆಲವು ದಿನಗಳ ಹಿಂದೆ ವಿಳಾಸ ಬದಲಾಯಿಸಿ, ಕಸ್ಟಂ ಅಧಿಕಾರಿ ಎಂದು ಹೇಳಿಕೊಂಡಿದ್ದ. ‘ಅಗರ್‌ಸೇನ್ ವೈವಾಹಿಕ ಮಂಚ್’ ಎಂಬ ವಾಟ್ಸ್‌‌ಆ್ಯಪ್ ಗ್ರೂಪ್‌ನಲ್ಲಿ ಸೇರಿಕೊಂಡು ಮಹಿಳೆಯರ ಸ್ವವಿವರ ಪಡೆದುಕೊಳ್ಳುತ್ತಿದ್ದ. ಹಿಂದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ‘ವಧು–ವರರು ಬೇಕಾಗಿದ್ದಾರೆ’ ಎಂಬ ಜಾಹೀರಾತುಗಳನ್ನು ಗಮನಿಸಿ, ಅಲ್ಲಿನ ಮಹಿಳೆಯರ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮದುವೆ ಆಗುವುದಾಗಿ ನಂಬಿಸುತ್ತಿದ್ದ. ರಾತ್ರಿ ವೇಳೆ ಕರೆ ಮಾಡಿ ಮಹಿಳೆಯರ ಜೊತೆಗೆ ಅಸಭ್ಯವಾಗಿ ಮಾತನಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

ರೈಲ್ವೆ ಎಸ್‌ಪಿ ಸೌಮ್ಯಲತಾ ನೇತೃತ್ವದಲ್ಲಿ ಡಿವೈಎಸ್‌ಪಿ ರವಿಕುಮಾರ್, ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಸಂತೋಷ್ ಎಂ. ಪಾಟೀಲ್, ಬೆಂಗಳೂರು ಠಾಣೆ ಪಿಎಸ್‌ಐ ಶರಣ ಬಸವರಾಜ ಸಿ.ಬಿರಾದಾರ ಮತ್ತು ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದೆ.

ಆರೋಪಿ ಸೃಷ್ಟಿಸಿಕೊಂಡಿದ್ದ ಪ್ರೊಫೈಲ್‌

ಚಿಕ್ಕಪ್ಪನ ಸೋಗಿನಲ್ಲಿ ಭೇಟಿ

‘ಕೊಯಮತ್ತೂರಿನ ಮಹಿಳೆಯೊಬ್ಬರನ್ನು ಪರಿಚಯಿಸಿಕೊಂಡಿದ್ದ ಆರೋಪಿ ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿದ್ದ. ಹೀಗಾಗಿ ಆಕೆಯ ಪೋಷಕರನ್ನು ಮದುವೆ ಮಾತುಕತೆಗೆ ನಗರ ರೈಲ್ವೆ ನಿಲ್ದಾಣಕ್ಕೆ ಕರೆಸಿಕೊಂಡಿದ್ದ. ರೈಲ್ವೆ ನಿಲ್ದಾಣದಲ್ಲೇ ಮಹಿಳೆಯರ ಪೋಷಕರನ್ನು ಯುವಕನ ಚಿಕ್ಕಪ್ಪನ ಸೋಗಿನಲ್ಲಿ ಭೇಟಿಯಾಗಿದ್ದ ಆರೋಪಿ ಅವರಿಗೂ ವಂಚಿಸಿದ್ದ. ಮನೆಯಲ್ಲೇ ಪರ್ಸ್‌ ಬಿಟ್ಟು ಬಂದಿದ್ದು ರೈಲ್ವೆ ಟಿಕೆಟ್ ಬುಕ್‌ ಮಾಡಲು ₹10 ಸಾವಿರಕ್ಕೆ ಬೇಡಿಕೆ ಸಲ್ಲಿಸಿದ್ದ. ಈತನನ್ನು ನಂಬಿದ್ದ ಅವರು ಹಣ ನೀಡಿದ್ದರು. ಟಿಕೆಟ್ ಬುಕ್ ಮಾಡಿ ಬರುತ್ತೇನೆ ಎಂದು ಹೇಳಿ ಮೊಬೈಲ್ ನಂಬರ್ ಸ್ವಿಚ್ಡ್‌ ಆಫ್ ಮಾಡಿಕೊಂಡು ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.