ADVERTISEMENT

ಜ್ಞಾನಾರ್ಜನೆ ಶಿಕ್ಷಣ: ಕೋರ್ಸ್‌ಗೆ ತಗ್ಗಿದ ಆಸಕ್ತಿ

ತುಮಕೂರು ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜಿ. ಸುರೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 19:38 IST
Last Updated 4 ಆಗಸ್ಟ್ 2019, 19:38 IST
ತುಮಕೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಭಾನುವಾರ ಕಾರ್ಯಾಗಾರ ಉದ್ಘಾಟಿಸಿದ ಪ್ರೊ.ಕೆ.ಜೆ. ಸುರೇಶ್ ಮಾತನಾಡಿದರು. ಡಾ.ಭಾಸ್ಕರ್, ಪ್ರೊ.ಡಿ.ಆರ್.ಮೋಹನ್‌ಕುಮಾರ್, ಪ್ರೊ.ಜಗದೀಶ್, ಪುಟ್ಟರಾಜು ಇದ್ದರು
ತುಮಕೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಭಾನುವಾರ ಕಾರ್ಯಾಗಾರ ಉದ್ಘಾಟಿಸಿದ ಪ್ರೊ.ಕೆ.ಜೆ. ಸುರೇಶ್ ಮಾತನಾಡಿದರು. ಡಾ.ಭಾಸ್ಕರ್, ಪ್ರೊ.ಡಿ.ಆರ್.ಮೋಹನ್‌ಕುಮಾರ್, ಪ್ರೊ.ಜಗದೀಶ್, ಪುಟ್ಟರಾಜು ಇದ್ದರು   

ತುಮಕೂರು: ‘ಜ್ಞಾನಾರ್ಜನೆಯ ಶಿಕ್ಷಣಕ್ಕಿಂತ, ಉದ್ಯೋಗಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಾನ್ಯತೆ ದೊರೆತಿದೆ. ಅನೇಕ ವಿಷಯಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದೇ ಇರುವುದರಿಂದ ಕೋರ್ಸ್‌ ಮುಚ್ಚುವ ಸ್ಥಿತಿ ಎದುರಾಗಿದೆ’ ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗ ಕುಲಸಚಿವ ಪ್ರೊ.ಕೆ.ಜಿ.ಸುರೇಶ್ ಹೇಳಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘವು ‘ಗುಣಮಟ್ಟದ ಉನ್ನತ ಶಿಕ್ಷಣ ಕಡೆಗೆ ಒಂದು ಹೆಜ್ಜೆ ಮತ್ತು ಸವಾಲುಗಳು’ ಎಂಬ ವಿಷಯ ಕುರಿತು ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ತತ್ವಜ್ಞಾನಿಗಳಿಗಿಂತ, ಉದ್ಯೋಗಸ್ಥರನ್ನು ಸೃಷ್ಟಿಸಲಷ್ಟೆ ಶಿಕ್ಷಣ ಬಳಕೆಯಾಗುತ್ತಿದೆ. ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಅಧ್ಯಾಪಕರು ಮನಸ್ಸು ಮಾಡಬೇಕಿದೆ’ ಎಂದು ಹೇಳಿದರು.

ADVERTISEMENT

ಮಾಹಿತಿ, ಆವಿಷ್ಕಾರ, ಸಂಶೋಧನೆ, ಕೌಶಲ ಅಂಶಗಳನ್ನೊಳಗೊಂಡ ಸಮಗ್ರ ಶಿಕ್ಷಣ ಅವಶ್ಯಕವಾಗಿದೆ ಎಂದು ಪ್ರತಿಪಾದಿಸಿದರು.

‘ಉನ್ನತ ಶಿಕ್ಷಣ ಸುಧಾರಣಾ ಆಯೋಗಗಳ ಶಿಫಾರಸ್ಸುಗಳು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಶಿಕ್ಷಣ ನೀತಿಗೆ ಅನುಗುಣವಾಗಿವೆ. ಇವುಗಳನ್ನು ಒಳಗೊಂಡ ಜ್ಞಾನವಂತ ವಿದ್ಯಾರ್ಥಿಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಅಧ್ಯಾಪಕರ ಮೇಲಿದೆ’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಕ್ ಸಮಿತಿ ಸಂಚಾಲಕರಾಗಿದ್ದ ಡಾ.ಸಿದ್ದಲಿಂಗಸ್ವಾಮಿ ಭಾಗವಹಿಸಿದ್ದರು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಗದೀಶ್, ತುಮಕೂರು ವಿ.ವಿ. ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಡಿ.ಆರ್.ಮೋಹನ್‌ಕುಮಾರ್, ಕಾರ್ಯದರ್ಶಿ ಪುಟ್ಟರಾಜು, ಖಜಾಂಚಿ ಡಾ.ಪ್ರಸನ್ನ, ಮಾಜಿ ಅಧ್ಯಕ್ಷರಾದ ಜಿ.ತಿಪ್ಪೇಸ್ವಾಮಿ, ಪ್ರೊ.ಎಚ್.ವಿ.ವೇಣುಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.