ADVERTISEMENT

ಕತ್ತಲೆ ತರದಿರಲಿ ಬೆಳಕಿನ ಹಬ್ಬ

ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ: ಜಾಗರೂಕತೆ ವಹಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 19:48 IST
Last Updated 26 ಅಕ್ಟೋಬರ್ 2019, 19:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವುದು ಪಟಾಕಿ. ಆದರೆ, ಪಟಾಕಿ ಸಿಡಿತದ ವೇಳೆ ಅಜಾಗರೂಕತೆಯೇ ಶಾಶ್ವತ ಅಂಧತ್ವಕ್ಕೆ ನೂಕುವ ಸಾಧ್ಯತೆಗಳಿವೆ. ಹಾಗಾಗಿ, ನಗರದ ವಿವಿಧ ಕಣ್ಣಿನ ಆಸ್ಪತ್ರೆಗಳುಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಹಬ್ಬದ ದಿನಗಳಲ್ಲಿ 24x7 ಸೇವೆಗಳನ್ನು ನೀಡಲು ಮುಂದಾಗಿವೆ.

ಮಿಂಟೊ, ನಾರಾಯಣ ನೇತ್ರಾಲಯ, ನೇತ್ರಧಾಮ, ಶಂಕರ, ಡಾ. ಅಗರವಾಲ್ ಸೇರಿದಂತೆ ವಿವಿಧ ಕಣ್ಣಿನ ಆಸ್ಪತ್ರೆಗಳು ಚಿಕಿತ್ಸೆಗೆ ಬೇಕಾದ ಔಷಧಗಳನ್ನು ದಾಸ್ತಾನು ಮಾಡಿಕೊಂಡಿವೆ. ಅದೇ ರೀತಿ, ಪ್ರತ್ಯೇಕ ಹಾಸಿಗೆ ವ್ಯವಸ್ಥೆಯನ್ನು ಮಿಂಟೊ, ವಿಕ್ಟೋರಿಯಾ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ಮಾಡಲಾಗಿದೆ. ಪಟಾಕಿ ತ್ಯಜಿಸಿ, ಹಣತೆ ದೀಪ ಹಚ್ಚುವ ಮೂಲಕ ಈ ವರ್ಷದ ದೀಪಾವಳಿ ಆಚರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜತೆಗೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಮನವಿ ಮಾಡಿವೆ.

ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾಗುವ ಜತೆಗೆ ಸುಟ್ಟಗಾಯಗಳಾಗುವ ಸಾಧ್ಯತೆಗಳಿರುತ್ತವೆ. ಪಟಾಕಿಯ ಜೋರಾದ ಶಬ್ದದಿಂದಶ್ರವಣ ದೋಷ ಕೂಡಾ ಉಂಟಾಗುತ್ತದೆ. ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಹೊಗೆಯಿಂದ ಉಸಿರಾಟದ (ಆಸ್ತಮಾ) ಹಾಗೂ ಚರ್ಮದ ತೊಂದರೆ ಕಾಣಿಸಿಕೊಳ್ಳಲಿವೆ. ಪಟಾಕಿ ಹಚ್ಚುವಾಗ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ನಗರದ ವೈದ್ಯರು ಮನವಿ ಮಾಡಿದ್ದಾರೆ.

ADVERTISEMENT

‘ಪಟಾಕಿ ಕಣ್ಣಿಗೆ ಮಾರಕವಾಗಿದ್ದು, ಅಂಧತ್ವ ತರುವ ಸಾಧ್ಯತೆಯಿರುತ್ತದೆ. ಸಾಮಾನ್ಯವಾಗಿ ಪಟಾಕಿ ಸಿಡಿತದಿಂದ ಗಾಯಕ್ಕೊಳಗಾದವರಲ್ಲಿ ಶೇ 19 ರಷ್ಟು ಮಂದಿಗೆ ಕಣ್ಣಿಗೆ ಹಾನಿಯಾಗಿರುತ್ತದೆ.ಶೇ 30 ರಷ್ಟು ಮಂದಿ ಕೈ ಬೆರಳಿಗೆ ಹಾನಿ
ಮಾಡಿಕೊಂಡಿರುತ್ತಾರೆ. ಕಳೆದ ವರ್ಷಪಟಾಕಿ ಸಿಡಿತದಿಂದ 48 ಮಂದಿ ಕಣ್ಣಿನ ಗಾಯಕ್ಕೆ ಚಿಕಿತ್ಸೆ ಪಡೆದಿದ್ದಾರೆ’ ಎಂದು ಮಿಂಟೊ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ರಾಥೋಡ್ ತಿಳಿಸಿದರು.

ನಕ್ಷತ್ರಕಡ್ಡಿ ಕೂಡಾ ಅಪಾಯಕಾರಿ:‘ಎಚ್ಚರಿಕೆ ವಹಿಸದೆ ಪಟಾಕಿ ಸಿಡಿಸಿದಲ್ಲಿ ದೀಪಾವಳಿ ಕತ್ತಲೆಯನ್ನು ತರುವ ಸಾಧ್ಯತೆಗಳಿವೆ. ಕಳೆದ ಮೂರು ವರ್ಷದಲ್ಲಿ ಪಟಾಕಿಯಿಂದ ಗಾಯಗೊಂಡ 130 ಮಂದಿಗೆ ಚಿಕಿತ್ಸೆ ನೀಡಿದ್ದೇವೆ. ಕಡಿಮೆ ತೀವ್ರತೆಯ ಪಟಾಕಿಗಳೆಂದು ಗುರುತಿಸಿರುವ ನಕ್ಷತ್ರಕಡ್ಡಿ, ನೆಲಚಕ್ರ ಇನ್ನಿತರವುಗಳೇ ಹೆಚ್ಚು ಅಪಾಯಕಾರಿ. ಇವುಗಳೂ ಸಿಡಿಯುವ ಸಾಧ್ಯತೆ ಇರುತ್ತದೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ಮಾಹಿತಿ ನೀಡಿದರು.

ಮುಂಜಾಗ್ರತೆ ಇರಲಿ

*ಪಟಾಕಿ ಖರೀದಿಸಲೇ ಬೇಕಾದಲ್ಲಿ ಐಎಸ್ಐ ಗುರುತಿನ ಪಟಾಕಿಗಳನ್ನು ಖರೀದಿಸಿ

*ಪಟಾಕಿಗಳ ಮೇಲಿರುವ ಎಚ್ಚರಿಕೆ, ಸೂಚನೆ ಅನುಸರಿಸಿ

*ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ

*ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ

*ಮೈದಾನ, ಖಾಲಿ ಜಾಗಗಳಲ್ಲಷ್ಟೇ ಪಟಾಕಿ ಹಚ್ಚಿ

*ಬೆಂಕಿ ಹಾಗೂ ತಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ

*ತೀವ್ರ ಸುಟ್ಟ ಗಾಯವಾದಲ್ಲಿ ಗಾಯದ ಮೇಲೆ ನೀರು ಹಾಕಬೇಡಿ. ಒದ್ದೆ ಬಟ್ಟೆಯಿಂದ ಸುತ್ತಿ, ಸುರಕ್ಷಿತ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಕರೆದೊಯ್ಯಿರಿ

*ಪಟಾಕಿ ಸುಡುವುದಕ್ಕೆ ಗಾಜಿನ ಬಾಟಲಿಗಳನ್ನು ಬಳಸಬೇಡಿ. ಇದರಿಂದ ಸಿಡಿಯುವ ಚೂರುಗಳು ಕಣ್ಣಿಗೆ ಹಾನಿ ಮಾಡಬಹುದು

*ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ

*ಪಟಾಕಿ ಸಿಡಿದಾಗ ಯಾವುದಾದರೂ ಕಿಡಿ ನಿಮ್ಮ ಕಣ್ಣನ್ನು ಸೇರಿದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ

*ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬೇಡಿ

*ಕೈಯಲ್ಲೇ ಪಟಾಕಿ ಸಿಡಿಸುವ ಸಾಹಸ ಬೇಡ

*ಅರೆಬರೆ ಸುಟ್ಟ ಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ

ಸಹಾಯವಾಣಿಗಳು

*ಮಿಂಟೊ ಆಸ್ಪತ್ರೆ -080-26701646, 26707176, 9481740137

*ನಾರಾಯಣ ನೇತ್ರಾಲಯ: ರಾಜಾಜಿನಗರ ಶಾಖೆ - 080-66126141/66126143, ಹೊಸೂರು ರಸ್ತೆ ಶಾಖೆ - 080-66660655, ಕ್ಯಾಸ್ಟಲ್ ಸ್ಟ್ರೀಟ್ - 080-66974003, ಬನ್ನೇರುಘಟ್ಟ ರಸ್ತೆ, ದೂ. 080-61222400/ 61222401.

*ಶಂಕರ ಕಣ್ಣಿನ ಆಸ್ಪತ್ರೆ (ಮಾರತ್ಹಳ್ಳಿ)- 080-28542727/28

*ರೈನ್ ಬೋ ಮಕ್ಕಳ ಆಸ್ಪತ್ರೆ (ಬನ್ನೇರುಘಟ್ಟ)- 7349739080, ಮಾರತಹಳ್ಳಿ- 8884436024

*ಜಯನಗರದ ನೇತ್ರಧಾಮ – 080 26088000 / 9845195898

*ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ- 08022240736/ 9845010510

*ಫೋರ್ಟಿಸ್ ಆಸ್ಪತ್ರೆ- ವಸಂತ ನಗರ-96868 60310, ರಾಜಾಜಿನಗರ- 080 6191 4665

*ನಾರಾಯಣ ನೇತ್ರಾಲಯ- 9902546046 ಮತ್ತು 9902821128.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.