ADVERTISEMENT

ರಕ್ಷಣಾ ಭೂಮಿ ಹಸ್ತಾಂತರಕ್ಕೆ ಮೀನಮೇಷ: ಸಂಸದ ಪಿ.ಸಿ ಮೋಹನ್ ಕಿಡಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 5:34 IST
Last Updated 20 ಡಿಸೆಂಬರ್ 2022, 5:34 IST
ಪಿ.ಸಿ.ಮೋಹನ್
ಪಿ.ಸಿ.ಮೋಹನ್   

ನವದೆಹಲಿ: ‘ಬೆಂಗಳೂರಿನಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ರಕ್ಷಣಾ ಭೂಮಿಯನ್ನು ಹಸ್ತಾಂತರಿಸಲು ಇಲಾಖೆಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ‘ ಎಂದು ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ ಸೋಮವಾರ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಬೆಂಗಳೂರು ನಗರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯ ಒದಗಿಸುವ ಕೆಲಸ ಆಗಬೇಕಿದೆ ಎಂದರು.

‘ಕರ್ನಾಟಕ ಸರ್ಕಾರ ಹಾಗೂ ಬಿಬಿಎಂಪಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಮೂಲಸೌಕರ್ಯ ಯೋಜನೆಗಳ ಜಾರಿಗೆ ರಕ್ಷಣಾ ಇಲಾಖೆಯ ಭೂಮಿ ಬೇಕಾಗಿದೆ. ಕೆಲವು ಅಧಿಕಾರಿಗಳ ಅಸಹಕಾರದಿಂದ ಈ ಭೂಮಿ ಹಸ್ತಾಂತರ ಆಗಿಲ್ಲ’ ಎಂದರು.

ADVERTISEMENT

‘ಭೂಮಿಯನ್ನು ಪಾಲಿಕೆಗೆ ಹಸ್ತಾಂತರಿಸಲು ದಶಕಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿದೆ. ಹಲವು ಸುತ್ತಿನ ಮಾತುಕತೆಗಳಾಗಿವೆ. ಇಲಾಖೆಗಳ ನಡುವಿನ ಭೂ ಜಗಳದಿಂದಾಗಿ ಮೂಲಸೌಕರ್ಯ ಯೋಜನೆಗಳ ಮೇಲೆ ಪರಿಣಾಮ ಬೀರಿದೆ’ ಎಂದು ಅವರು ತಿಳಿಸಿದರು.

‘ಮೂಲಸೌಕರ್ಯ ಯೋಜನೆಗಳಿಗೆ 10 ಕಡೆ ರಕ್ಷಣಾ ಇಲಾಖೆಯ ಜಮೀನು ಬೇಕಾಗಿದೆ. 2018–19ರಲ್ಲಿ 10 ಜಾಗಗಳ ಹಸ್ತಾಂತರಕ್ಕೆ ರಕ್ಷಣಾ ಸಚಿವರು ಹಾಗೂ ಕರ್ನಾಟಕ ಸರ್ಕಾರದ ಮಧ್ಯೆ ಒಪ್ಪಂದ ಆಗಿತ್ತು. ಆ ಬಳಿಕ ಮೂರು ಕಡೆಗಳಲ್ಲಷ್ಟೇ ಜಾಗ ಹಸ್ತಾಂತರ ಆಗಿದೆ. ಉಳಿದ ಕಡೆಗಳಲ್ಲಿ ಕಾಮಗಾರಿ ನಡೆಸಲು ರಕ್ಷಣಾ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿಲ್ಲ’ ಎಂದರು.

ರಕ್ಷಣಾ ಸಚಿವರು ನಿರ್ದೇಶನ ನೀಡಿದ ಬಳಿಕವೂ ಇಲಾಖೆಯ ಅಧಿಕಾರಿಗಳು ಜಾಗ ಹಸ್ತಾಂತರ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ ಅವರು, ಈ ಸಂಬಂಧ ರಕ್ಷಣಾ ಸಚಿವ ರಾಜನಾಥ ಸಿಂಗ್ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.