ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಖಂಡಿಸಿ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ದೆಹಲಿ ಚಲೊ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಅಂದೋಳ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಹುಲ್‌ಗಾಂಧಿ ಅವರು ದೇಶದಾದ್ಯಂತ ಯಾತ್ರೆ ಮಾಡುವ ವೇಳೆ ಅಲೆಮಾರಿಗಳ ಪರವಾಗಿ ಇರುವುದಾಗಿ ಹೇಳಿದ್ದರು. ಅವರದ್ದೇ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿದ್ದು, ಅಲೆಮಾರಿಗಳಿಗೆ ರಾಜ್ಯ ಸರ್ಕಾರ ಮಾಡಿರುವ ಅನ್ಯಾಯವನ್ನು ಸರಿಪಡಿಸಲು ಕೋರುತ್ತೇವೆ’ ಎಂದು ಹೇಳಿದರು.
ಹಿಂದಿನ ಎಲ್ಲ ಆಯೋಗಗಳು ಅಲೆಮಾರಿಗಳಿಗೆ ಶೇಕಡ 1ರಷ್ಟು ಮೀಸಲಿಟ್ಟಿದ್ದರು. ನ್ಯಾ. ನಾಗಮೋಹನದಾಸ್ ಆಯೋಗವೂ ಶೇ 1ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತ್ತು. ಆದರೆ, ಒಳಮೀಸಲಾತಿ ಅನುಷ್ಟಾನಕ್ಕೆ ತರುವಾಗ ರಾಜ್ಯ ಸರ್ಕಾರವು ಈ ಮೀಸಲಾತಿಯನ್ನು ಸ್ಪರ್ಶ ಜಾತಿಗಳ ಗುಂಪಿಗೆ ಸೇರಿಸಿ 49 ಅಲೆಮಾರಿ ಸಮುದಾಯಗಳಿಗೆ 10 ಸೂಕ್ಷ್ಮ ಸಮುದಾಯಗಳಿಗೆ ಅನ್ಯಾಯವೆಸಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಲೆಮಾರಿ ಸಮುದಾಯದ ಹೋರಾಟಗಾರರಾದ ಬಿ.ಎಚ್. ಮಂಜುನಾಥ್, ವೆಂಕಟರಮಣ, ಬಸವರಾಜ ನಾರಾಯಣಕರ್, ಶಿವಕುಮಾರ್, ಸಾವಿತ್ರಿ ರತ್ನಾಕರ್, ಸಣ್ಣ ಮಾರಪ್ಪ, ವಸಂತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.