ಬೆಂಗಳೂರು: ಪ್ರೀತಿಯ ವಿಚಾರಕ್ಕೆ ದುಷ್ಕರ್ಮಿಗಳು ಡೆಲಿವರಿ ಬಾಯ್ ಒಬ್ಬರನ್ನು ಅಪಹರಿಸಿ, ಕೊಲೆ ಮಾಡಿ ಪರಾರಿಯಾಗಿರುವ ಘಟನೆ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ
ನೀರುಗಂಟೆ ಪಾಳ್ಯ ಗ್ರಾಮದ ನಿವಾಸಿ ಪ್ರೀತಮ್ (19) ಕೊಲೆಯಾದ ಯುವಕ. ದೇವನಹಳ್ಳಿ ಪಟ್ಟಣದ ಸೂಲಿಬೆಲೆ ರಸ್ತೆಯಲ್ಲಿ ಜೆಪ್ಟೊ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಪ್ರೀತಮ್, ಎಂಬಿಬಿಎಸ್ ಓದುತ್ತಿದ್ದ ತನಗಿಂತ ಎರಡು ವರ್ಷ ದೊಡ್ಡವಳಾದ ಗಂಟಿಗಾಹನಳ್ಳಿಯ ಯುವತಿಯನ್ನು ಪ್ರೀತಿಸುತ್ತಿದ್ದರು ಎಂದು ಗೊತ್ತಾಗಿದೆ.
ಈ ಇಬ್ಬರ ಪ್ರೀತಿಯ ವಿಚಾರ ತಿಳಿದ ಯುವತಿಯ ಪೋಷಕರು ಹಾಗೂ ಸಂಬಂಧಿಕರು ಆಕೆಯಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರು. ಆದರೂ ಯುವತಿಯ ಜೊತೆ ಮಾತನಾಡವುದನ್ನು ಮುಂದುವರಿಸಿದ್ದರು. ಇದರಿಂದ ಕೋಪಗೊಂಡ ಯುವತಿಯ ಸಂಬಂಧಿ ಶ್ರೀಕಾಂತ, ಪ್ರೀತಮ್‌ಗೆ ಹಲವು ಬಾರಿ ಎಚ್ಚರಿಕೆ ನೀಡಿ, ಬೆದರಿಸಿ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
‘ಶ್ರೀಕಾಂತ್ ಮತ್ತು ಆತನ ಸಹಚರರು ಶುಕ್ರವಾರ ಪ್ರೀತಮ್‌ನನ್ನು ಅಪಹರಿಸಿ, ಕಾರಿನಲ್ಲಿ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪ್ರೀತಮ್ ಮೃತದೇಹ ನೀರಗಂಟೆ ಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹತ್ತಿರ ಪತ್ತೆಯಾಗಿದೆ. ಮೂಗು, ಬಾಯಿಯಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ. ಮಗನ ಮೊಬೈಲ್ ಸಹ ನಾಪತ್ತೆಯಾಗಿದೆ. ಅಪಹರಣ ಮಾಡಿ ಕೊಲೆ ಮಾಡಿರುವ ಶ್ರೀಕಾಂತ್ ಮತ್ತು ನಾಲ್ವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮೃತ ಯುವಕನ ತಂದೆ ರಾಮಚಂದ್ರ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.