ADVERTISEMENT

ಬೆಂಗಳೂರು | ಡೆಲಿವರಿ ಬಾಯ್ ಕೊಲೆ ಪ್ರಕರಣ: ಐವರು ಸ್ನೇಹಿತರ ಬಂಧನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 16:11 IST
Last Updated 21 ಏಪ್ರಿಲ್ 2024, 16:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಲಸೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸತೀಶ್ ಕುಮಾರ್ ಕೊಲೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಶಿವಾಜಿನಗರದ ಸತೀಶ್ ಕುಮಾರ್, ಆಹಾರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 19ರಂದು ರಾತ್ರಿ ಇವರನ್ನು ಕೊಲೆ ಮಾಡಲಾಗಿತ್ತು. ಆರೋಪಿಗಳಾದ ದೊಮ್ಮಲೂರಿನ ಎಸ್. ಸಂತೋಷ್ (36), ಇಂದಿರಾನಗರದ ಎಂ. ಪವನ್ ಕುಮಾರ್ (26), ತಿಪ್ಪಸಂದ್ರದ ರಂಜಿತ್ ಕುಮಾರ್ (33), ದೊಮ್ಮಲೂರು ಲೇಔಟ್‌ನ ಜೆ. ವಿನೋದ್ ಮ್ಯಾಥ್ಯೂ (35) ಹಾಗೂ ರಂಗನಾಥ್‌ನನ್ನು (41) ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸತೀಶ್ ಕುಮಾರ್ ಹಾಗೂ ಆರೋಪಿಗಳು, ಹಲವು ವರ್ಷಗಳ ಸ್ನೇಹಿತರು. ಎಲ್ಲರೂ ದೊಮ್ಮಲೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಮದ್ಯದ ಪಾರ್ಟಿ ಮಾಡಲೆಂದು, ಸಮೀಪದ ಬಿಡಿಎ ಪಾರ್ಕ್‌ಗೆ ತೆರಳಿದ್ದರು. ಅಲ್ಲಿಯೇ ಎಲ್ಲರೂ ಮದ್ಯ ಕುಡಿದಿದ್ದರು.’

ADVERTISEMENT

‘ಮದ್ಯದ ಅಮಲಿನಲ್ಲಿ ಸ್ನೇಹಿತರ ನಡುವೆ ಜಗಳ ಶುರುವಾಗಿತ್ತು. ಇದೇ ಸಂದರ್ಭದಲ್ಲಿ ಆರೋಪಿಗಳು, ಸತೀಶ್‌ ಕುಮಾರ್ ಮೇಲೆ ಹಲ್ಲೆ ಮಾಡಿದ್ದರು. ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿದ್ದರು. ತೀವ್ರ ರಕ್ತಸ್ರಾವದಿಂದ ಸತೀಶ್ ಮೃತಪಟ್ಟಿದ್ದರು. ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.