ಬೆಂಗಳೂರು: ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ 368 ಮರ ಕಡಿಯಲು ಸಾರ್ವಜನಿಕರಿಂದ ವಿರೋಧ ವ್ಯಕ್ತಿಪಡಿಸಿದ್ದು, ಇಲ್ಲಿನ ನಿಲ್ದಾಣವನ್ನು ‘ಹಸಿರು ನಿಲ್ದಾಣ’, ಜೈವಿಕ ಉದ್ಯಾನವನ್ನಾಗಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ರೈಲ್ವೆ ಇಲಾಖೆ ವಸಂತನಗರದಲ್ಲಿರುವ ದಂಡು ಪ್ರದೇಶದ ಬಳಿಯ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಕೇಂದ್ರ ಅಭಿವೃದ್ಧಿಗೆ 368 ಮರ ತೆರವುಗೊಳಿಸುವ ಸಂಬಂಧ ನಾಗರಿಕರೊಂದಿಗೆ ಬಿಬಿಎಂಪಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ, ಮರ ತೆರವಿಗೆ ಪರಿಸರ ಕಾರ್ಯಕರ್ತರಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು.
‘ವಾಣಿಜ್ಯ ಕಟ್ಟಡವನ್ನು ಅತಿಹೆಚ್ಚು ಖಾಲಿ ಪ್ರದೇಶ ಹೊಂದಿರುವ ಬೈಯಪ್ಪನಹಳ್ಳಿಗೆ ಸ್ಥಳಾಂತರಿಸಬೇಕು. ಅಲ್ಲಿ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದ್ದು, ಈ ಪಾರಂಪರಿಕ ಮರಗಳನ್ನು ಉಳಿಸಬೇಕು’ ಎಂದು ಆಗ್ರಹಿಸಿದರು.
‘ಪರಿಸರಕ್ಕಾಗಿ ನಾವು’ ಸಂಘಟನೆಯ ಅಧ್ಯಕ್ಷ ಎ.ಟಿ. ರಾಮಸ್ವಾಮಿ ಮಾತನಾಡಿ, ‘ಬೆಂಗಳೂರಿನಲ್ಲಿ 1873ರಲ್ಲಿ ಶೇಕಡಾ 70ರಷ್ಟು ಹಸಿರು ಹೊದಿಕೆ ಇತ್ತು. ಇದು 2023ರಲ್ಲಿ ಶೇ 3ಕ್ಕೆ ಇಳಿದಿದೆ. ಕೆನಡಾದಲ್ಲಿ ಪ್ರತಿ ವ್ಯಕ್ತಿಗೆ 10,163 ಮರಗಳಿವೆ. ಆಸ್ಟ್ರೇಲಿಯಾದಲ್ಲಿ 3,266, ಅಮೆರಿಕದಲ್ಲಿ 699 ಮರಗಳಿವೆ. ಆದರೆ ಭಾರತದಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ ಕೇವಲ 28 ಮರಗಳಿವೆ’ ಎಂದು ಹೇಳಿದರು.
‘ನಗರದಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು, ಮರಗಳನ್ನಾಗಿ ಬೆಳೆಸಬೇಕು. ಇರುವ ಮರಗಳನ್ನು ಉಳಿಸಿಕೊಳ್ಳುವುದು ಅರಣ್ಯ ಇಲಾಖೆಯ ಕರ್ತವ್ಯವಾಗಬೇಕು. ಮರಗಳನ್ನು ಕಡಿದು ವಾಣಿಜ್ಯ ಕಟ್ಟಡಗಳನ್ನು ಕಟ್ಟಲು ಅವಕಾಶ ನೀಡಬಾರದು. ರೈಲ್ವೆ ಕಂಟೊನ್ಮೆಂಟ್ ಕಾಲೊನಿಯಲ್ಲಿರುವ ಮರಗಳನ್ನು ಕಡಿದು ವಾಣಿಜ್ಯ ಅಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸುವುದು ಬೇಡ. ಈ ಯೋಜನೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು’ ಎಂದು ಆಗ್ರಹಿಸಿದರು.
ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ‘ಬೆಂಗಳೂರು ನಗರ ಈಗಾಗಲೇ ಹಲವು ಗಂಭೀರ ಪರಿಸರ ಸಮಸ್ಯೆಗಳಿಗೆ ಸಿಲುಕಿ ನಲುಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಾಣಿಜ್ಯ ಅಭಿವೃದ್ಧಿ ಯೋಜನೆ ಉದ್ದೇಶಕ್ಕೆ ಮರಗಳನ್ನು ಕಡಿಯುವುದು ಸರಿಯಲ್ಲ. ಅರಣ್ಯ ಇಲಾಖೆಯ ಕೆಲಸ ಕೆಲವೇ ಬಂಡವಾಳಶಾಹಿಗಳಿಗೆ ಅನುಕೂಲ ಮಾಡುವುದಲ್ಲ. ಸಾಮಾನ್ಯ ಜನರಿಗೆ ಅನುಕೂಲ ಆಗುವಂತೆ ಅರಣ್ಯ ಇಲಾಖೆ ನಡೆದುಕೊಳ್ಳಬೇಕು. ಸಾಮಾಜಿಕ ನ್ಯಾಯದ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು.
ನೂರಕ್ಕೂ ಹೆಚ್ಚು ಜನ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಹಾಜರಿದ್ದರು. ಮರಗಳನ್ನು ಕಡಿಯದಂತೆ ಒಕ್ಕೊರಲಿನಿಂದ ಒತ್ತಾಯ ಮಾಡಿದರು.
‘ಪರಿಸರಕ್ಕಾಗಿ ನಾವು’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ, ಪಾರ್ವತಿ ಶ್ರೀರಾಮ್, ಸಂಘಟನಾ ಕಾರ್ಯದರ್ಶಿ ಸಿಕಂದರ್ ಸಿ.ಎಚ್., ಕಾರ್ಯದರ್ಶಿಗಳಾದ ವೇಣುಗೋಪಾಲ್, ಮನೋಜ್, ರೋಖಡೆ, ಖಜಾಂಚಿ ಗೌಡಯ್ಯ ಹಾಗೂ ನಮ್ಮ ಬೆಂಗಳೂರು ಫೌಂಡೇಶನ್‌ನ ವಿನೋದ್, ಅಲೆಕ್ಸಾಂಡರ್, ಜೋಸೆಫ್ ಹೂವರ್, ವಿಜಯ್, ಪ್ರಿಯಾ ಚೆಟ್ಟಿ ಭಾಗವಹಿಸಿದ್ದರು.
ಬಿಬಿಎಂಪಿ ಅರಣ್ಯ ವಿಭಾಗದ ಡಿಸಿಎಫ್ ಬಿ.ಎಲ್.ಜಿ. ಸ್ವಾಮಿ, ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.