ಬೆಂಗಳೂರು: ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಕಾನೂನು ಬದ್ಧಗೊಳಿಸಿಲ್ಲ. ಕೇಂದ್ರದ ಮಾರ್ಗಸೂಚಿ ಸಲಹಾರೂಪದಲ್ಲಿದ್ದು, ಕಾನೂನು ಸ್ವರೂಪ ಪಡೆದುಕೊಂಡಿಲ್ಲ ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ತಿಳಿಸಿದೆ.
ಒಕ್ಕೂಟದ ಅಧ್ಯಕ್ಷ ಎಸ್. ನಟರಾಜ ಶರ್ಮ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಮಾರ್ಗಸೂಚಿಯನ್ನೇ ಕಾನೂನು ಎಂಬಂತೆ ಅಗ್ರಿಗೇಟರ್‌ಗಳು ಬಿಂಬಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿವೆ’ ಎಂದು ಆರೋಪಿಸಿದರು.
ದಟ್ಟಣೆಯ ಅವಧಿಯಲ್ಲಿ ನಿಗದಿತ ದರದ ಎರಡುಪಟ್ಟು ಹಾಗೂ ದಟ್ಟಣೆ ಇಲ್ಲದ ಸಮಯದಲ್ಲಿ ಶೇ 50ರಷ್ಟು ಕಡಿಮೆ ದರ ವಿಧಿಸಬಹುದು ಎಂದು ಮಾರ್ಗಸೂಚಿಯಲ್ಲಿ ಅಗ್ರಿಗೇಟರ್‌ಗಳಿಗೆ ಅವಕಾಶ ನೀಡಿದೆ. ಇದು ಮೋಟಾರು ವಾಹನ ಕಾಯ್ದೆ–1988ರ ಸೆಕ್ಷನ್ 67ರ ಉಲ್ಲಂಘನೆಯಾಗಿದೆ ಎಂದು ದೂರಿದರು.
ಮಾರ್ಗಸೂಚಿಯು ಹಲವು ಲೋಪಗಳಿಂದ ಕೂಡಿದೆ. ದರ ನಿಗದಿ ಹಕ್ಕು ರಾಜ್ಯ ಸರ್ಕಾರದ್ದಾಗಿದೆ. ದುಪ್ಪಟ್ಟು ದರ ವಿಧಿಸುವುದರಿಂದ ಪ್ರಯಾಣಿಕರಿಗೆ ಹೊರೆಯಾಗಲಿದೆ. ಸಕಾರಣವಿಲ್ಲದೆ ಚಾಲಕ ಅಥವಾ ಪ್ರಯಾಣಿಕ ಸೇವೆ ರದ್ದು ಪಡಿಸಿದರೆ ಶುಲ್ಕದ ಶೇ 10ರಷ್ಟು ಹಣ ಕಡಿತ ಮಾಡುವ ಮಾರ್ಗಸೂಚಿಯು ಅಗ್ರಿಗೇಟರ್‌ಗಳಿಗೆ ಅಧಿಕ ಲಾಭಾಂಶ ನೀಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಈ ಮಾರ್ಗಸೂಚಿಗಳಿಗೆ ತಿದ್ದುಪಡಿ ತರುವಂತೆ ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಒಕ್ಕೂಟದ ಪದಾಧಿಕಾರಿಗಳಾದ ಗಂಡಸಿ ಸದಾನಂದ ಸ್ವಾಮಿ, ಸಂತೋಷ್ ಕುಮಾರ್, ಆದರ್ಶ ಮಂಜುನಾಥ್, ಶಬರಿನಾಥ್, ರವಿಕುಮಾರ್, ಪ್ರತಿಮಾ, ರಾಜು ಕನ್ನಡಿಗ ಮತ್ತು ಸಂಚಾರಿ ಸತೀಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.