ADVERTISEMENT

ಚಿತ್ರಕಲಾ ಶಿಕ್ಷಕರ ಅಂತಿಮ ಆಯ್ಕೆಪಟ್ಟಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 19:31 IST
Last Updated 22 ಮಾರ್ಚ್ 2022, 19:31 IST

ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡದೆ, ವಿಳಂಬ ಧೋರಣೆ ಅನುಸರಿಸುತ್ತಿದೆ’ ಎಂದುರಾಯಚೂರಿನ ರಾಜ್ಯ ಚಿತ್ರಕಲಾ ಶಿಕ್ಷಕರ ಡಿಪ್ಲೊಮಾ ಸಂಘದ ಕಾರ್ಯದರ್ಶಿ ರಮೇಶ್ ಸಜ್ಜನ್ ದೂರಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ನೇಮಕಾತಿಗೆ2011ರಲ್ಲಿ ಅರ್ಜಿ ಕರೆದು, ಕಾರಣಾಂತರಗಳಿಂದ ರದ್ದು ಮಾಡಿದರು. ಮತ್ತೆ 2016ರಲ್ಲಿ ಮೊರಾರ್ಜಿ ದೇಸಾಯಿ ಪ್ರೌಢಶಾಲೆಗಳಲ್ಲಿ 230 ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಯಿತು. 2021ರ ನವೆಂಬರ್‌ನಲ್ಲಿ ತಾತ್ಕಾಲಿಕ ಪಟ್ಟಿಯೂ ಪ್ರಕಟಿಸಿದೆ. ಆದರೆ, ಅಂತಿಮ ಆಯ್ಕೆಪಟ್ಟಿಯನ್ನು ಈವರೆಗೆ ಪ್ರಕಟಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘2016ರಿಂದ ಸುಮಾರು ಒಂಬತ್ತು ಬಾರಿ 3 ಸಾವಿರ ಅಭ್ಯರ್ಥಿಗಳ ಮೂಲದಾಖಲಾತಿಗಳ‍ಪರಿಶೀಲನೆ ನಡೆಸಲಾಗಿದೆ. ಇದು ನೇರನೇಮಕಾತಿ ಆಗಿರುವುದರಿಂದ ಎಲ್ಲ ಅಭ್ಯರ್ಥಿಗಳ ವಯೋಮಿತಿ 45 ಮೀರಿದೆ. ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪೈಕಿ 15 ಮಂದಿ ಈಗಾಗಲೇ ಮೃತಪಟ್ಟಿದ್ದಾರೆ’ ಎಂದರು.

ADVERTISEMENT

‘ಕೋವಿಡ್‌ನಿಂದಾಗಿ ಚಿತ್ರಕಲಾ ಶಿಕ್ಷಕರ ಬದುಕು ದುಸ್ತರವಾಗಿದೆ. ರಾಜ್ಯದ ಶೇ 70ರಷ್ಟು ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ನೇಮಕ ಮಾಡಿಕೊಂಡಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಿ, ಚಿತ್ರಕಲಾ ಪದವೀಧರರಿಗೆ ಉದ್ಯೋಗ ಕಲ್ಪಿಸಬೇಕು. ಅಂತಿಮ ಆಯ್ಕೆ ಪಟ್ಟಿಯನ್ನು ಶೀಘ್ರವಾಗಿ ಬಿಡುಗಡೆ ಮಾಡಿ, ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.