ADVERTISEMENT

ಸಿಎಎ, ಎನ್‌ಆರ್‌ಸಿ ರದ್ದುಗೊಳಿಸಿ: ಸೈಯದ್ ಸಾದತ್ ಉಲ್ಲಾ ಹುಸೈನಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 16:19 IST
Last Updated 11 ಡಿಸೆಂಬರ್ 2021, 16:19 IST

ಬೆಂಗಳೂರು:‌‘ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದಂತೆಯೇಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಾಯ್ದೆಗಳನ್ನೂ ಕೇಂದ್ರ ಸರ್ಕಾರ ರದ್ದುಪಡಿಸಬೇಕು’ ಎಂದು ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಾದತ್ ಉಲ್ಲಾ ಹುಸೈನಿ ಆಗ್ರಹಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯುಲ್ಲಿ ಮಾತನಾಡಿದ ಅವರು, ‘ರೈತರು ಒಂದು ವರ್ಷ ನಡೆಸಿದ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಪ್ರತಿಭಟನೆಯ ನಂತರ ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿತು. ಜನರ ಮೂಲಭೂತ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಕಸಿಯುವ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ‌ಗಳನ್ನು ತಕ್ಷಣವೇ ಹಿಂದೆ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿಯೂ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಬಾರದು’ ಎಂದು ಒತ್ತಾಯಿಸಿದರು.

‘ಮುಖ್ಯ ತೀರ್ಮಾನಗಳನ್ನು ಕೈಗೊಳ್ಳುವಾಗ ಚರ್ಚೆ, ಅಭಿಪ್ರಾಯ ಭೇದಗಳಿಗೆ ಮನ್ನಣೆ ಕೊಡುವುದು ನಿಜವಾದ ಪ್ರಜಾಪ್ರಭುತ್ವ.ಎಲ್ಲ ಧರ್ಮದವರು ಒಟ್ಟಾಗಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ. ಆದರೆ, ದೇಶದಲ್ಲಿ ದಿನದಿಂದ ದಿನಕ್ಕೆ ಕೋಮುಗಲಭೆ, ದೌರ್ಜನ್ಯ, ಸಂವಿಧಾನ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಚುನಾವಣೆಗಳು ಬಂದರೆ ರಾಜಕೀಯ ಪಕ್ಷಗಳು ಒಡೆದು ಆಳುವ ನೀತಿಗಳನ್ನು ಪ್ರಯೋಗಿಸುತ್ತವೆ. ಧರ್ಮ, ಜಾತಿಯ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸಲಾಗುತ್ತಿದೆ’ ಎಂದರು.

ADVERTISEMENT

‘ದೇಶದ ಎಲ್ಲಾ ವರ್ಗಗಳ ಜನರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದದ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನಗಳು ನಡೆಯಬೇಕಿದೆ. ಬಹುತ್ವ ಹಾಗೂ ವೈವಿಧ್ಯದಲ್ಲಿ ಏಕತೆಯ ತತ್ವಗಳನ್ನು ಎಲ್ಲರೂ ಗೌರವಿಸಬೇಕಿದೆ’ ಎಂದು ಹೇಳಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷಮೊಹಮ್ಮದ್ ಸಾದ್ ಬೆಳಗಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.