ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ಅವೈಜ್ಞಾನಿಕ ಜಾತಿ ಜನಗಣತಿ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ಇಲ್ಲದಿದ್ದರೆ, ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಗಾ.ನಂ. ಶ್ರೀಕಂಠಯ್ಯ, ‘2014–15ರಲ್ಲಿ ಎಚ್. ಕಾಂತರಾಜ ನೇತೃತ್ವದ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅವೈಜ್ಞಾನಿಕವಾಗಿದೆ. ರಾಜ್ಯದಲ್ಲಿರುವ ಎಲ್ಲ ಸಮುದಾಯಗಳ ಮಾಹಿತಿ ಸಮರ್ಪಕವಾಗಿ ಸಂಗ್ರಹಿಸಿಲ್ಲ. ಈ ಅವೈಜ್ಞಾನಿಕ ಜಾತಿ ಜನಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರಸ್ಕರಿಸಬೇಕು’ ಎಂದು ಒತ್ತಾಯಿಸಿದರು.
‘ಜಾತಿ ಜನಗಣತಿ ವರದಿಯನ್ನು 10 ವರ್ಷಗಳ ಹಿಂದೆ ನಡೆಸಲಾಗಿತ್ತು. ಅದನ್ನು ಈಗ ಜಾರಿಗೊಳಿಸುವುದು ಸರಿಯಲ್ಲ. 2014–15ರಲ್ಲಿ ರಾಜ್ಯದಲ್ಲಿ 5.8 ಕೋಟಿ ಜನಸಂಖ್ಯೆ ಇತ್ತು. ಈಗ ಜನಸಂಖ್ಯೆ ಹೆಚ್ಚಳವಾಗಿದೆ. ಆದ್ದರಿಂದ, ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಜಾತಿ ಜನಗಣತಿ ನಡೆಸಬೇಕು’ ಎಂದು ಆಗ್ರಹಿಸಿದರು.
‘ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಸಾರ್ವಜನಿಕವಾಗಿ ಅದನ್ನು ಜಾತಿ ಜನಗಣತಿ ಎಂದು ಬಿಂಬಿಸುವ ಮೂಲಕ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದೆ. ಸಮೀಕ್ಷೆಗೂ ಜಾತಿ ಜನಗಣತಿಗೂ ಬಹಳ ವ್ಯತ್ಯಾಸವಿದೆ’ ಎಂದರು.
‘ಒಕ್ಕಲಿಗ ಸಮುದಾಯದ ಸಚಿವರು, ಶಾಸಕರು ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡಬೇಕು. ನಮ್ಮ ಸಮುದಾಯಕ್ಕೆ ಶೇಕಡ 12ರಷ್ಟು ಮೀಸಲಾತಿ ನಿಗದಿಪಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.
ಸಮಿತಿ ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.