ADVERTISEMENT

‘ಕನ್ನಡಿಗರಿಗೆ ಉದ್ಯೋಗ: ಆಂಧ್ರ ಮಾದರಿ ಜಾರಿ’

ವಿಧಾನ ಪರಿಷತ್‌ನಲ್ಲಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 22:41 IST
Last Updated 23 ಸೆಪ್ಟೆಂಬರ್ 2020, 22:41 IST
ಜೆ.ಸಿ. ಮಾಧುಸ್ವಾಮಿ
ಜೆ.ಸಿ. ಮಾಧುಸ್ವಾಮಿ   

ಬೆಂಗಳೂರು: ‘ಕರ್ನಾಟಕದಲ್ಲಿ ಖಾಸಗಿ ಕ್ಷೇತ್ರದಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಖಾತರಿಪಡಿಸಲು ಆಂಧ್ರಪ್ರದೇಶದ ಮಾದರಿಯಲ್ಲಿ ಜಿಲ್ಲಾಮಟ್ಟದ ಮೇಲುಸ್ತುವಾರಿ ಸಮಿತಿಗಳನ್ನು ಅಸ್ತಿತ್ವಕ್ಕೆ ತರಲಾಗುವುದು’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ವಯ ಖಾಸಗಿಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಲು ಸಿದ್ಧಪಡಿಸಿರುವ ಮಸೂದೆಯನ್ನು ಸದನದಲ್ಲಿ ಮಂಡಿಸುವಂತೆ ವಿಧಾನ ಪರಿಷತ್‌ನಲ್ಲಿ ಬುಧವಾರ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಅವರು ನಿಯಮ 330ರಡಿ ಪ್ರಸ್ತಾಪಿಸಿದ ವಿಷಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ಈ ಭರವಸೆ ನೀಡಿದರು.

‘ಉದ್ಯಮ ಸ್ಥಾಪನೆಗೆ ಕನ್ನಡದ ನೆಲ, ಜಲವನ್ನು ಬಳಸಿಕೊಳ್ಳುವ ಕಂಪನಿಗಳು ಸ್ಥಳೀಯರಿಗೆ ಉದ್ಯೋಗ ನೀಡುವುದಿಲ್ಲ. ಕೆಳಹಂತದ ಕೆಲವು ಉದ್ಯೋಗಗಳನ್ನು ನೀಡಿ ವಂಚಿಸುತ್ತವೆ. ಸರ್ಕಾರದ ಸೌಲಭ್ಯ ಪಡೆದ ಉದ್ದಿಮೆಗಳಷ್ಟೇ ಅಲ್ಲ, ಸೌಲಭ್ಯ ಪಡೆಯದ ಉದ್ದಿಮೆಗಳೂ ಸ್ಥಳೀಯರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು. ಇದಕ್ಕಾಗಿ ಆಂಧ್ರಪ್ರದೇಶ ಮಾದರಿ ಅನುಷ್ಠಾನ ಮಾಡಲಾಗುವುದು’ ಎಂದರು.

ADVERTISEMENT

ವಿಷಯ ಪ್ರಸ್ತಾಪಿಸಿದ ಹೊರಟ್ಟಿ, ‘ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಲಭಿಸಿದೆ. ಪರಿಣಾಮವಾಗಿ ರಾಜ್ಯದಲ್ಲಿ ಪರ ಭಾಷಿಕರ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರನ್ನು ಪರಭಾಷಿಕ ಶಾಸಕರೇ ಆಳುವ ದಿನಗಳು ಬಂದರೂ ಅಚ್ಚರಿ ಇಲ್ಲ. ‌ಕನ್ನಡಿಗರಿಗೆ ಮೀಸಲಾತಿ ಖಾತರಿಪಡಿಸುವ ಮೂಲಕ ನ್ಯಾಯ ಒದಗಿಸಬೇಕು’ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.