ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕರ್ನಾಟಕ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) (ಕೆಲವು ಭೂಮಿಗಳ ವರ್ಗಾವಣೆ ನಿಷೇಧ– ಪಿಟಿಸಿಎಲ್) ಕಾಯ್ದೆಗೆ ವಿರುದ್ಧವಾಗಿ ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ರಜನಿಕಾಂತ್ ಆದೇಶ ಹೊರಡಿಸುತ್ತಿದ್ದಾರೆ ಎಂದು ಪ್ರಜಾ ವಿಮೋಚನಾ ಚಳವಳಿ ಆರೋಪಿಸಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ, ‘ರಜನಿಕಾಂತ್ ಅವರು ಬಿಲ್ಡರ್‌ಗಳ ಪರವಾಗಿ ಆದೇಶ ಹೊರಡಿಸಿ ಪರಿಶಿಷ್ಟರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಕಂದಾಯ ಸಚಿವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಮನೆ ಮುಂದೆ ಶುಕ್ರವಾರ ಧರಣಿ ನಡೆಸಲು ನಿರ್ಧರಿಸಲಾಗಿದೆ’ ಎಂದರು.
ಕ್ರಯಪತ್ರಗಳಾಗಿದ್ದರೂ ಅದಕ್ಕೆ ವಿರುದ್ಧವಾಗಿ ರಜನಿಕಾಂತ್ ಆರು ತಿಂಗಳಲ್ಲಿ ಸುಮಾರು 500 ಕಂದಾಯ (ಆರ್‌ಎ) ಪ್ರಕರಣಗಳಲ್ಲಿ ಆದೇಶ ಮಾಡಿದ್ದಾರೆ. ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯಂತೆ ಮೂಲ ಮಂಜೂರುದಾರರ ಪರವಾಗಿ ಆದೇಶ ನೀಡುತ್ತಿಲ್ಲ. ಬಿಲ್ಡರ್‌ಗಳ, ಭೂಮಾಲೀಕರ ಪರವಾಗಿ ನಿಂತಿರುವ ಈ ಅಧಿಕಾರಿ ಬಡವರ, ದಲಿತರ ಯಾವುದೇ ಕೆಲಸಗಳನ್ನು ಮಾಡಿಕೊಡುತ್ತಿಲ್ಲ ಆರೋಪಿಸಿದರು.
ಇದೇ ರೀತಿ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿರುವ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಶ ಹಾಗೂ ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಪ್ರಜಾವಿಮೋಚನಾ ಚಳವಳಿಯ ಬೆಂಗಳೂರು ವಿಭಾಗೀಯ ಅಧ್ಯಕ್ಷ ಎಸ್.ಕೆ. ಮಾದೇಶ್, ರಾಜ್ಯ ಘಟಕದ ಕಾರ್ಯದರ್ಶಿ ಆಲೂರು ದೇವರಾಜ, ಬೆಂಗಳೂರು ಗ್ರಾಮಾಂತರ ಘಟಕದ ಅಧ್ಯಕ್ಷ ಹೊನ್ನಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.