ADVERTISEMENT

ಜಲ ಸಂಪನ್ಮೂಲ ಇಲಾಖೆಯಲ್ಲೇ ಬಡ್ತಿ ಕೊಡಿ: ಸಿವಿಲ್‌ ಎಂಜಿನಿಯರ್‌ಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 21:24 IST
Last Updated 4 ಜೂನ್ 2020, 21:24 IST

ಬೆಂಗಳೂರು: ‘ಜಲಸಂಪನ್ಮೂಲ ಇಲಾಖೆಗೆಂದೇ ನೇಮಕಗೊಂಡ ಸಹಾಯಕ ಎಂಜಿನಿಯರ್‌ಗಳಿಗೆ ಅದೇ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗಳಿಗೆ ಬಡ್ತಿ ನೀಡಬೇಕು’ ಎಂದು ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಸಿವಿಲ್‌ ಎಂಜಿನಿಯರ್ಸ್‌ ಸಂಘ ಒತ್ತಾಯಿಸಿದೆ.

‘ಜಲಸಂಪನ್ಮೂಲ ಇಲಾಖೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇಲಾಖೆಯಲ್ಲಿ ಹೆಚ್ಚು ಅವಧಿಯಿಂದ ಕರ್ತವ್ಯ
ನಿರ್ವಹಿಸಿ ವಿಶೇಷ ಅನುಭವ ಹೊಂದಿದ ತಜ್ಞ ಎಂಜಿನಿಯರ್‌ಗಳ ಅಗತ್ಯವಿದೆ. ಹೀಗಾಗಿ, ಈ ಇಲಾಖೆಯಲ್ಲಿ ಇರುವವರಿಗೆ ಅಲ್ಲಿಯೇ ಬಡ್ತಿ ನೀಡಬೇಕು’ ಎಂದು ಸಂಘ ಸಮರ್ಥನೆ ನೀಡಿದೆ.

‘ಬಡ್ತಿ ನೀಡುವುದಕ್ಕೆ ನ್ಯಾಯಮಂಡಳಿಯ ತಡೆಯಾಜ್ಞೆ ಇದ್ದರೂ ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗಳು ಬಡ್ತಿ ನೀಡಿವೆ. ಆದರೆ, ಜಲಸಂಪನ್ಮೂಲ ಇಲಾಖೆಗೆ ನೇಮಕಗೊಂಡವರಿಗೆ ಮಾತ್ರ ಬಡ್ತಿ ನೀಡಿಲ್ಲ. ಸರ್ಕಾರ ಈ ನಡೆ ಸರಿಯಲ್ಲ. ನ್ಯಾಯಮಂಡಳಿಯ ಅಂತಿಮ ತೀರ್ಪಿಗೆ ಒಳಪಟ್ಟು, ನಿಯಮ 32ರ ಅಡಿ ಸ್ವತಂತ್ರ ಪ್ರಭಾರ ದಲ್ಲಿಸಿ ಪದೋನ್ನತಿ ನೀಡಿದರೆ ಯಾರಿಗೂ ಅನ್ಯಾಯ ಆಗುವುದಿಲ್ಲ. ಅಂತಿಮ ಪಟ್ಟಿ ಸಿದ್ಧವಾದ ನಂತರ ಕ್ರೋಡೀಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಬ್ಯಾಗ್‌ಲಾಗ್‌ ಹುದ್ದೆಗಳಿಗೆ ನೇಮಕಗೊಂಡವರಿಗೆ ಬಡ್ತಿ ನೀಡಲು ಹಾಗೂ 2003ರಲ್ಲಿ ನೇಮಕಗೊಂಡವರನ್ನು ಜಲಸಂಪನ್ಮೂಲ ಇಲಾಖೆಯಲ್ಲಿ ವಿಲೀನಗೊಳಿಸಲು ಸಹಮತವಿದೆ’ ಎಂದೂ ಸಿವಿಲ್ ಎಂಜಿನಿಯರ್ಸ್ ಸಂಘ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.