
ಬೆಂಗಳೂರು: ಶ್ರೀಶೈಲ ದೇವಸ್ಥಾನದ ಆವರಣದಲ್ಲಿ ರಾಜ್ಯಕ್ಕೆ ಎರಡು ಎಕರೆ ಬದಲು ಐದು ಎಕರೆ ಜಾಗ ನೀಡಬೇಕು, ತಿರುಮಲದಲ್ಲಿ ನೀಡಿರುವ ಏಳು ಎಕರೆ ಜಾಗದ ಗುತ್ತಿಗೆ ಅವಧಿಯನ್ನು 30 ವರ್ಷದ ಬದಲು 99 ವರ್ಷಕ್ಕೆ ಹೆಚ್ಚಿಸಬೇಕು ಎಂದು ಆಂಧ್ರಪ್ರದೇಶದ ರಾಜ್ಯಪಾಲರಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.
ಆಂಧ್ರದ ರಾಜ್ಯಪಾಲ ಅಬ್ದುಲ್ ನಜೀರ್ ಅವರ ಕಚೇರಿಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯದ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ತಿರುಮಲದಲ್ಲಿ ರಾಜ್ಯ ಮುಜರಾಯಿ ಇಲಾಖೆಯಿಂದ ಮನವಿ ಬಂದಲ್ಲಿ ವಿಶೇಷ ದರ್ಶನಕ್ಕೆ ಅವಕಾಶಕ್ಕೆ ನೀಡಲು ಕ್ರಮ ಕೈಗೊಳ್ಳಬೇಕು. ಮಂತ್ರಾಲಯದಲ್ಲಿ ರಾಜ್ಯ ಸರ್ಕಾರ ಖರೀದಿಸಿರುವ 5 ಎಕರೆ ಜಾಗವನ್ನು ರಾಜ್ಯದ ಹೆಸರಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಸಣ್ಣ ನೀರಾವರಿ ಸಚಿವ ಬೋಸರಾಜು, ಕಂದಾಯ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಮುಜರಾಯಿ ಆಯುಕ್ತ ಶರತ್, ಆಂಧ್ರದ ಮುಜರಾಯಿ ಸಚಿವ
ಆನಂ ರಾಮನಾರಾಯಣ ರೆಡ್ಡಿ, ಅಲ್ಲಿನ ಮುಜರಾಯಿ ಆಯುಕ್ತ ರಾಮಚಂದ್ರಮೋಹನ್ ಉಪಸ್ಥಿತರಿದ್ದರು.
‘ಆಂಧ್ರದ ರಾಜ್ಯಪಾಲರು ಹಿಂದೆ ಬೆಂಗಳೂರಿಗೆ ಬಂದಿದ್ದಾಗ ಮನವಿ ಸಲ್ಲಿಸಲಾಗಿತ್ತು. ಅದರ ಬಗ್ಗೆ ಈ ಬಾರಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ. ರಾಜ್ಯದ ಭಕ್ತರ ಅನುಕೂಲಕ್ಕಾಗಿ ಮಾಡಿರುವ ವಿಶೇಷ ಪ್ರಯತ್ನಗಳು ಸಫಲವಾಗಿ, ಶೀಘ್ರವೇ ಜಾರಿಗೆ ಬರಲಿವೆ’ ಎಂದು ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.