ಚುನಾವಣೆ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ನನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಕೂಡಲೇ ನಡೆಸಬೇಕು’ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಆಗ್ರಹಿಸಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್, ‘ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೂಲಕ ಭಾರತದಲ್ಲಿ ಸ್ವಾವಲಂಬಿ ಗ್ರಾಮಗಳ ಸ್ಥಾಪನೆ ಗಾಂಧೀಜಿ ಅವರ ಕನಸಾಗಿತ್ತು. ಅದಕ್ಕಾಗಿ ಅವರು ಪ್ರತಿ ಗಾಮದಲ್ಲೂ ಪಂಚಾಯಿತಿಗಳ ಸ್ಥಾಪನೆಗೆ ಕರೆ ನೀಡಿದ್ದರು. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಪೂರಕ ವಾತಾವರಣ ಸೃಷ್ಟಿ ಮಾಡಬೇಕಾದ ಪಂಚಾಯತ್ ರಾಜ್ ಇಲಾಖೆ, ಅಧಿಕಾರಿಗಳ ಕನಸಿನ ಯೋಜನೆಗಳನ್ನು ಅನುಷ್ಠಾನಗೊಳಿಸುವ ಇಲಾಖೆಯಾಗಿ ಮಾರ್ಪಟ್ಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ರಾಜ್ಯದ ಅಭಿವೃದ್ಧಿ ಆಯುಕ್ತರಾಗಿ ರಾಜ್ಯದ ಎಲ್ಲ ಅಭಿವೃದ್ಧಿ ಇಲಾಖೆಗಳ ನಿರ್ವಹಣೆ ಮಾಡುತ್ತಿರುವ ಹಿರಿಯ ಅಧಿಕಾರಿಗಳೇ ಪಂಚಾಯತ್ ರಾಜ್ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಪಂಚಾಯತ್ ರಾಜ್ ಇಲಾಖೆಯ ಸಮರ್ಪಕ ಕಾರ್ಯನಿರ್ವಹಣೆಗೆ ತೊಡಕಾಗಿದೆ. ಕೂಡಲೇ ಸರ್ಕಾರವು ಪಂಚಾಯತ್ ರಾಜ್ ಇಲಾಖೆಗೆ ಪೂರ್ಣಾವಧಿ ಮುಖ್ಯಸ್ಥರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.
‘ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ‘ಗಾಂಧಿ ಭಾರತ’ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರ ಆಚರಿಸುತ್ತಿದೆ. ಗಾಂಧಿ ಕನಸಿನ ಗ್ರಾಮ ಸ್ವರಾಜ್ಯವನ್ನು ಕರ್ನಾಟಕದಲ್ಲಿ ಸಾಕಾರಗೊಳಿಸುವುದಾಗಿ ಸರ್ಕಾರ ಘೋಷಿಸಿದೆ. ಆದ್ದರಿಂದ ಸರ್ಕಾರವು ಈ ಘೋಷಣೆಗೆ ಬದ್ಧವಾಗಿರಬೇಕು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಎಲ್ಲ ಅಂಶಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.