ADVERTISEMENT

ದೇವರಾಜ ಅರಸರಿಗೆ ಭಾರತ ರತ್ನ ನೀಡಲು ಆಗ್ರಹ

ಲೋಹಿಯಾ ಚಿಂತಹಕರ ವೇದಿಕೆಯಿಂದ ಪ್ರಧಾನಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 7:42 IST
Last Updated 19 ಸೆಪ್ಟೆಂಬರ್ 2020, 7:42 IST
ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು.
ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು.   

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಡಾ. ರಾಮ ಮನೋಹರ ಲೋಹಿಯಾ ಚಿಂತಕರ ವೇದಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಒತ್ತಾಯಿಸಿದೆ.

‘ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾಣದಲ್ಲಿ ದೇವರಾಜ ಅರಸು ಅವರು ಮಹತ್ವದ ಪಾತ್ರ ವಹಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಜಾರಿಗೊಳಿಸಿದ ‘ಕರ್ನಾಟಕ ಭೂ ಸುಧಾರಣಾ ಕಾಯ್ದೆ–1961’ ರಾಜ್ಯದಲ್ಲಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ರೈತಾಪಿ ವರ್ಗದಲ್ಲಿ ಭೂ ಹಿಡುವಳಿಯ ಸ್ವರೂಪದ ಬದಲಾವಣೆಗೆ ಈ ಐತಿಹಾಸಿಕ ಕಾಯ್ದೆ ಕಾರಣವಾಗಿದೆ’ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಳಗೌಡ, ಸಾಹಿತಿ ಬರಗೂರು ರಾಮಚಂದ್ರಪ್ಪ, ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌, ಡಾ. ರಾಮ ಮನೋಹರ ಲೋಹಿಯಾ ಚಿಂತಕರ ವೇದಿಕೆ ಅಧ್ಯಕ್ಷ ಬಿ.ಎಸ್‌. ಶಿವಣ್ಣ, ವಕೀಲ ಲಕ್ಷ್ಮಿ ನಾರಾಯಣ್‌, ಚಿಂತಕ ಬಂಜಗೆರೆ ಜಯಪ್ರಕಾಶ್‌, ವಕೀಲ ಇಸ್ಮಾಯಿಲ್‌ ಝಬಿವುಲ್ಲಾ ಮತ್ತು ಶಿಕ್ಷಣ ತಜ್ಞ ಭೀಮಣ್ಣ ಮೇಟಿ ಪ್ರಧಾನಿಗೆ ಶನಿವಾರ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸುವ ವಿಚಾರದಲ್ಲಿ ಅರಸು ಅವರು ತಮ್ಮ ಕಾಲವನ್ನು ಮೀರಿ ಯೋಚಿಸುತ್ತಿದ್ದರು. ಜನಪರ ಕಾಯ್ದೆಗಳ ಜಾರಿಗೆ ಸದಾ ತುಡಿಯುತ್ತಿದ್ದರು. ಜೀತ ಪದ್ಧತಿ ನಿಷೇಧ, ಭೂರಹಿತ ಕಾರ್ಮಿಕರ ಮಕ್ಕಳಿಗಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಭಿಕ್ಷುಕರ ಪುನರ್ವಸತಿ, ಋಣಮುಕ್ತ ಯೋಜನೆ, ವಲಸೆ ಕಾರ್ಮಿಕರಿಗಾಗಿ ಆಶ್ರಯ ತಾಣಗಳನ್ನು ನಿರ್ಮಿಸುವ ಯೋಜನೆಗಳನ್ನು ಜಾರಿಗೊಳಿಸಿದ್ದರು. ಎಲೆಕ್ಟ್ರಾನಿಕ್‌ ಸಿಟಿ ನಿರ್ಮಾಣದ ಪರಿಕಲ್ಪನೆಯು ಅವರ ಕಾಲದಲ್ಲೇ ಜನ್ಮ ತಳೆದಿತ್ತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ADVERTISEMENT

‘ಅರಸು ಅವರ ಈ ಎಲ್ಲ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪುರಸ್ಕಾರ ನೀಡಬೇಕು. ಇದರಿಂದ ಕರ್ನಾಟಕಕ್ಕೆ ಗೌರವ ಸಿಗುವುದರ ಜತೆಯಲ್ಲೇ, ಹೊಸ ತಲೆಮಾರಿನ ನಾಯಕತ್ವ ಸೃಷ್ಟಿಗೆ ದಾರಿದೀಪವಾಗಲಿದೆ’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.