ADVERTISEMENT

ಬೆಂಗಳೂರಿನಲ್ಲಿ 262 ಡೆಂಗಿ ಪ್ರಕರಣ

1,567 ಮಂದಿ ಡೆಂಗಿ ಶಂಕಿತರಿಗೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 15:53 IST
Last Updated 14 ಫೆಬ್ರುವರಿ 2023, 15:53 IST
   

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದ್ದರೆ, ಡೆಂಗಿ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಈ ವರ್ಷ ಈಗಾಗಲೇ 262 ಮಂದಿಯಲ್ಲಿ ಡೆಂಗಿ ಜ್ವರ ದೃಢಪಟ್ಟಿದೆ.

ಕಳೆದ ವರ್ಷ ಈ ವೇಳೆ ನಗರದಲ್ಲಿ 2,842 ಮಂದಿಯಲ್ಲಿ ಡೆಂಗಿ ಶಂಕೆ ವ್ಯಕ್ತವಾಗಿತ್ತು. ಅವರಲ್ಲಿ 74 ಮಂದಿಯಲ್ಲಿ ದೃಢಪಟ್ಟಿತ್ತು. ಈ ವರ್ಷ 1,567 ಮಂದಿಯಲ್ಲಿ ಡೆಂಗಿ ಶಂಕೆ ವ್ಯಕ್ತವಾಗಿದ್ದು, 512 ಮಂದಿಯ ರಕ್ತದ ಮಾದರಿಯನ್ನು ತಪಾಸಣೆ ಮಾಡಲಾಗಿದೆ. ಬೆಂಗಳೂರು ಹೊರತುಪಡಿಸಿ, ಉಳಿದ ಜಿಲ್ಲೆಗಳಿಂದ 367 ಪ್ರಕರಣಗಳು ವರದಿಯಾಗಿವೆ.

ಕಳೆದ ವರ್ಷ ಈ ವೇಳೆ ನಗರದಲ್ಲಿ ಚಿಕೂನ್‌ಗುನ್ಯಾ ಪ್ರಕರಣ ವರದಿಯಾಗಿರಲಿಲ್ಲ. ಈ ವರ್ಷ 415 ಶಂಕಿತರನ್ನು ಗುರುತಿಸಲಾಗಿದ್ದು, 75 ಮಂದಿಯ ರಕ್ತದ ಮಾದರಿಗಳನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ 34 ಜನರಲ್ಲಿ ಚಿಕೂನ್‌ಗುನ್ಯಾ ದೃಢಪಟ್ಟಿದೆ.

ADVERTISEMENT

ನಗರದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ದೃಢಪಟ್ಟ ಕೋವಿಡ್ ಪ್ರಕರಣಗಳನ್ನು ಬಿಬಿಎಂಪಿ ವಾರ್‌ ರೂಮ್ ವಿಶ್ಲೇಷಿಸಿದೆ. ಏಳು ದಿನಗಳಲ್ಲಿ 7,476 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, 96 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಸಕ್ರಿಯ ಪ್ರಕರಣಗಳು ನೂರರ ಗಡಿಯೊಳಗೆ (74) ಇವೆ. ಸದ್ಯ 8 ಮಂದಿ ಮಾತ್ರ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರಲ್ಲಿ ನಾಲ್ವರು ತೀವ್ರ ನಿಗಾ ಘಟಕ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದು ವಾರದ ಅವಧಿಯಲ್ಲಿ 94 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕು ದೃಢ ಪ್ರಮಾಣವು ಶೇ 2ರ ಗಡಿಯೊಳಗೆ ಇದೆ. ದೇಶದ ಪ್ರಮುಖ ಮಹಾನಗರಗಳಿಗೆ ಹೋಲಿಸಿದರೆ ಅಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಮಹಾನಗರಗಳಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಮುಂಬೈನಲ್ಲಿ 12, ನವದೆಹಲಿಯಲ್ಲಿ 10 ಹಾಗೂ ಚೆನ್ನೈನಲ್ಲಿ 9 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.