ADVERTISEMENT

ಬೆಂಗಳೂರು | ಡೆಂಗಿ: ಮೇಲ್ವಿಚಾರಣೆಗೆ ‘ವಾರ್‌ ರೂಮ್’

ದೃಢ ಪ್ರಕರಣಗಳಲ್ಲಿ ಜ್ವರ ಪೀಡಿತರ ಮೇಲೆ 14 ದಿನಗಳು ನಿಗಾ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 16:37 IST
Last Updated 11 ಜುಲೈ 2024, 16:37 IST
.
.   

ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಜ್ವರ ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆಗೆ ‘ವಾರ್‌ ರೂಮ್’ ಪ್ರಾರಂಭಿಸಿ, ಡೆಂಗಿ ಪೀಡಿತರ ಮೇಲೆ 14 ದಿನಗಳು ನಿಗಾ ವಹಿಸಬೇಕು ಎಂದು ಆರೋಗ್ಯ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. 

ಈ ಬಗ್ಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಸುತ್ತೋಲೆ ಹೊರಡಿಸಿದ್ದಾರೆ. ಆರೋಗ್ಯ ಸೌಧದಲ್ಲಿರುವ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ (ಎನ್‌ವಿಬಿಡಿಸಿಪಿ) ವಿಭಾಗವು ರಾಜ್ಯಮಟ್ಟದ ‘ವಾರ್‌ ರೂಮ್’ ಉಸ್ತುವಾರಿ ಹೊಂದಿರಲಿದೆ.

ಎಲ್ಲ ಜಿಲ್ಲೆಗಳು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗಿ ಜ್ವರ ಪರಿಸ್ಥಿತಿ ಮೇಲ್ವಿಚಾರಣೆ ಹಾಗೂ ದತ್ತಾಂಶ ಸಂಗ್ರಹಣೆಗೆ ನಿಯಂತ್ರಣ ಕೊಠಡಿ ಅಥವಾ ‘ಡೆಂಗಿ ವಾರ್‌ ರೂಮ್’ ಸಕ್ರಿಯಗೊಳಿಸಬೇಕು. ನಿಗಾ ಇರಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಬೇಕು. ಈ ಕಾರ್ಯಪಡೆ ವಾರಕ್ಕೊಮ್ಮೆ ಸಭೆ ನಡೆಸಿ, ಅಗತ್ಯ ಸಲಹೆ, ಸೂಚನೆಗಳನ್ನು ಸಂಬಂಧಪಟ್ಟವರಿಗೆ ನೀಡಬೇಕು. ಡೆಂಗಿ ಪೀಡಿತರಿಗೆ ಜ್ವರ ಲಕ್ಷಣಗಳು ಕಂಡುಬಂದ ದಿನದಿಂದ 14 ದಿನಗಳವರೆಗೆ ಅವರ ಮೇಲೆ ನಿಗಾ ಇಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. 

ADVERTISEMENT

ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳು ಅಧಿಕ ಪ್ರಕರಣಗಳು ವರದಿಯಾದ ಪ್ರದೇಶ (ಹಾಟ್‌ಸ್ಪಾಟ್) ಗುರುತಿಸಿ, ವಿವರವನ್ನು ರಾಜ್ಯಮಟ್ಟದ ‘ವಾರ್‌ ರೂಮ್‌’ಗೆ ಸಲ್ಲಿಸಬೇಕು. ಹೆಚ್ಚು ಪ್ರಕರಣಗಳು ವರದಿಯಾದ ಪ್ರದೇಶಗಳಲ್ಲಿ ಲಾರ್ವಾ ನಾಶ ಚಟುವಟಿಕೆಗಳನ್ನು ತೀವ್ರಗೊಳಿಸಬೇಕು. ಈ ಪ್ರದೇಶಗಳಲ್ಲಿ ಜ್ವರ ಕ್ಲಿನಿಕ್‌ಗಳನ್ನು ತುರ್ತಾಗಿ ಪ್ರಾರಂಭಿಸಬೇಕು. ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆ ನಿರೋಧಕ ಬೇವಿನ ಎಣ್ಣೆಯ ವಿತರಣೆಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ.

ಹಾಸಿಗೆ ಮೀಸಲು: ಡೆಂಗಿ ಜ್ವರ ಪ್ರಕರಣಗಳ ಅಗತ್ಯ ನಿರ್ವಹಣೆಗೆ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಐದು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ತಲಾ ಹತ್ತು ಹಾಸಿಗೆಗಳನ್ನು ಮೀಸಲಿಡಬೇಕು. ಮೀಸಲು ಹಾಸಿಗೆಗಳಷ್ಟು ಡೆಂಗಿ ಪ್ರಕರಣಗಳು ಇರದಿದ್ದಲ್ಲಿ ಆ ಹಾಸಿಗೆಗಳನ್ನು ಇತರ ರೋಗಿಗಳ ಆರೈಕೆಗೆ ಬಳಸಬೇಕು. ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣೆ ಸೌಲಭ್ಯವನ್ನು ಇಲಾಖೆ ವ್ಯಾಪ್ತಿಯಲ್ಲಿನ ವೈದ್ಯಕೀಯ ಸಂಸ್ಥೆಗಳಲ್ಲಿ ಉಚಿತವಾಗಿ ಒದಗಿಸಬೇಕು ಎಂದು ತಿಳಿಸಿದ್ದಾರೆ.

ಎಲ್ಲ ವೈದ್ಯಕೀಯ ಸಂಸ್ಥೆಗಳಲ್ಲಿ ಪರೀಕ್ಷೆ ಕಿಟ್‌ಗಳು ಹಾಗೂ ಔಷಧ ದಾಸ್ತಾನು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಎಲ್ಲಾ ಮನೆಗಳು, ಶಾಲಾ–ಕಾಲೇಜು, ಕಚೇರಿಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಈಡಿಸ್ ಲಾರ್ವಾ ಸಮೀಕ್ಷೆ ನಡೆಸಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.