ADVERTISEMENT

ದೇವಾಂಗ ಜಾತಿ ಉಲ್ಲೇಖಕ್ಕೆ ಅಂಜಿಕೆ ಬೇಡ: ಹೈಕೋರ್ಟ್‌ ನ್ಯಾಯಮೂರ್ತಿ ವಿ.ಶ್ರೀಶಾನಂದ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 14:33 IST
Last Updated 28 ಸೆಪ್ಟೆಂಬರ್ 2025, 14:33 IST
ರಾಜ್ಯ ದೇವಾಂಗ ನೌಕರರ ಸಂಘದ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು
ಪ್ರಜಾವಾಣಿ ಚಿತ್ರ
ರಾಜ್ಯ ದೇವಾಂಗ ನೌಕರರ ಸಂಘದ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನೇಕಾರಿಕೆ ಮೂಲಕ ಬದುಕು ಕಟ್ಟಿಕೊಂಡಿರುವ ದೇವಾಂಗ ಸಮುದಾಯದವರು ಅಳುಕದೇ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ ದೇವಾಂಗ ಹಾಗೂ ಧರ್ಮ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಿ’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ವಿ.ಶ್ರೀಶಾನಂದ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘವು ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮುದಾಯಗಳ ಏಳಿಗೆ ದೃಷ್ಟಿಯಿಂದ ಕಾನೂನು ಪ್ರಕಾರ ಸರ್ಕಾರ ಸಮೀಕ್ಷೆ ನಡೆಸಲಿ. ಅದಕ್ಕೆ ನಮ್ಮ ತಕರಾರು ಇಲ್ಲ.  ಸಮೀಕ್ಷೆಯಲ್ಲಿ ಎಲ್ಲಾ ಸಮುದಾಯಗಳು ಭಾಗಿಯಾಗಬೇಕು. 25 ಲಕ್ಷದಷ್ಟು ಜನಸಂಖ್ಯೆ ಇರುವ ದೇವಾಂಗ ಸಮುದಾಯದವರು ಯಾರಿಗೂ ಅಂಜಬೇಕಾಗಿಲ್ಲ. ಸರಿಯಾದ ಮಾಹಿತಿಯನ್ನು ಸಮೀಕ್ಷೆ ವೇಳೆ ಒದಗಿಸಬೇಕು’ ಎಂದು ಹೇಳಿದರು.

ADVERTISEMENT

‘ಬಹಳಷ್ಟು ಜಾತಿಯವರಿಗೆ ನಮ್ಮ ಜಾತಿ ಹೆಸರು ಬರೆಯಿಸಲು ಕೀಳರಿಮೆ ಇದೆ. ಇದು ಭಾರತದ ದುಸ್ಥಿತಿ ಎಂದೂ ಕೂಡ ಹೇಳಬೇಕಾಗುತ್ತದೆ. ದೇವಲ ಮಹರ್ಷಿಯ ಕುಲವಿದು. ಈ ಹೆಮ್ಮೆಯೂ ಸಮುದಾಯಕ್ಕೆ ಇರಲೇಬೇಕು' ಎಂದರು.

ವಿಧಾನಪರಿಷತ್‌ ಸದಸ್ಯೆ ಉಮಾಶ್ರೀ ಮಾತನಾಡಿ, ‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಬಗ್ಗೆ ನಕಾರಾತ್ಮಕ ಮಾತುಗಳ ಬಗ್ಗೆ ಕಿವಿಗೊಡಬಾರದು. ಸಣ್ಣ ಪುಟ್ಟ ದೋಷಗಳು ಇದ್ದೇ ಇರುತ್ತವೆ, ಅವುಗಳನ್ನು ಸರಿಪಡಿಸಲಾಗುತ್ತದೆ. ಸಮುದಾಯವರು ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ದೇವಾಂಗ ಎಂದು ನಮೂದಿಸಿದರೆ ನಿಖರ ಜನಸಂಖ್ಯೆ ತಿಳಿದು ಮುಂದೆ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ' ಎಂದು ಹೇಳಿದರು‘.

ದೊಡ್ಡಬಳ್ಳಾಪುರದ ತಪಸೀಹಳ್ಳಿ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಮಾತನಾಡಿ, ‘ನೇಕಾರಿಕೆ ಮೂಲಕವೇ ಕಷ್ಟದ ಬದುಕು ಸಾಗಿಸುತ್ತಿರುವ ರಾಜ್ಯದಲ್ಲಿ ಮಗ್ಗ ನೇಯುವವರ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಅದೇ ನಿಜವಾದ ಆಸ್ತಿ. ಸಮುದಾಯದ ಯುವಕರು ಬರೀ ಹಣ ಮಾಡುವುದನ್ನೇ ಮುಖ್ಯವಾಗಿಸಿಕೊಳ್ಳದೇ ಸಮಾಜದ ಪ್ರಗತಿಗೂ ಕೈ ಜೋಡಿಸಬೇಕು’ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ, ದೇವಾಂಗ ಸಂಘದ ಅಧ್ಯಕ್ಷ ಜಿ.ರಮೇಶ್‌, ಕೈ ಮಗ್ಗ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಪಿ.ಕಲಬುರ್ಗಿ, ವಕೀಲ ಪಿ.ಪ್ರಸನ್ನ ಕುಮಾರ್, ನೌಕರರ ಸಂಘದ ಅಧ್ಯಕ್ಷ ಡಿ. ನಾಗೇಶ್ ಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.