ಶುಕ್ರವಾರ ನಡೆದ ‘ಡಿಎಚ್ ಬೆಂಗಳೂರು 2040 ಶೃಂಗ’ದಲ್ಲಿ ಸನ್ ಮೊಬಿಲಿಟಿ ಅಧ್ಯಕ್ಷ ಚೇತನ್ ಮೈನಿ ದಿಕ್ಸೂಚಿ ಭಾಷಣ ಮಾಡಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಮಾಲಿನ್ಯ ಇಳಿಸುವ, ಕಡಿಮೆ ಇಂಧನ ವೆಚ್ಚದ ಎಲೆಕ್ಟ್ರಿಕ್ ವಾಹನಗಳೇ ಭವಿಷ್ಯದ ವಾಹನಗಳಾಗಿವೆ. ನಗರದಲ್ಲಿ 2030ರ ಹೊತ್ತಿಗೆ ಎಲ್ಲ ಬಸ್‌ಗಳು ಎಲೆಕ್ಟ್ರಿಕ್ ವಾಹನಗಳಾಗಿರಲಿವೆ (ಇವಿ) ಎಂದು ಸನ್ ಮೊಬಿಲಿಟಿ ಅಧ್ಯಕ್ಷ ಚೇತನ್ ಮೈನಿ ತಿಳಿಸಿದರು.
‘ಪ್ರಜಾವಾಣಿ’ಯ ಸೋದರ ಪತ್ರಿಕೆಯಾದ ಡೆಕ್ಕನ್ ಹೆರಾಲ್ಡ್ ಶುಕ್ರವಾರ ಹಮ್ಮಿಕೊಂಡಿದ್ದ ‘ಡಿಎಚ್ ಬೆಂಗಳೂರು 2040 ಶೃಂಗಸಭೆ’ಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಬಿಎಂಟಿಸಿಯ 6,200 ಬಸ್‌ಗಳು ನಗರದಲ್ಲಿ ಸಂಚರಿಸುತ್ತಿವೆ. ಅದರಲ್ಲಿ ಒಂದು ಸಾವಿರ ಬಸ್‌ಗಳು ಎಲೆಕ್ಟ್ರಿಕ್ ವಾಹನಗಳಾಗಿವೆ (ಇ.ವಿ.). ಇನ್ನೂ ಒಂದು ಸಾವಿರ ಇ.ವಿ. ಬಸ್‌ಗಳು ರಸ್ತೆಗಿಳಿಯಲು ತಯಾರಾಗಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ ಖರೀದಿಯಾದ ದ್ವಿಚಕ್ರವಾಹನಗಳಲ್ಲಿ ಶೇ 54ರಷ್ಟು ಇ.ವಿ. ಆಗಿದ್ದವು ಎಂದು ವಿವರ ನೀಡಿದರು.
ಬೆಂಗಳೂರಿನಲ್ಲಿ 4,500 ಚಾರ್ಜಿಂಗ್ ಕೇಂದ್ರಗಳಿವೆ. ದೇಶದ ಬೇರೆ ಯಾವುದೇ ನಗರದಲ್ಲಿ ಇಷ್ಟೊಂದು ಚಾರ್ಜಿಂಗ್ ಕೇಂದ್ರಗಳಿಲ್ಲ. ವಾಹನಗಳ ಚಾರ್ಜಿಂಗ್ ಇನ್ನಷ್ಟು ಸರಳಗೊಂಡರೆ ಎಲ್ಲ ವಾಹನಗಳು ಇ.ವಿ. ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮನೆಗಳ ಚಾವಣಿಯಲ್ಲಿ ಸೌರ ಫಲಕ ಅಳವಡಿಸಿ ಉತ್ಪತ್ತಿ ಮಾಡುವ ವಿದ್ಯುತ್‌ನಲ್ಲಿ ಒಂದು ಸ್ಕೂಟರ್ ಚಾರ್ಜ್ ಮಾಡಬಹುದು. ಇಂಥ ಉಪಕ್ರಮಗಳನ್ನು ಎಲ್ಲ ಕಡೆ ಕೈಗೊಳ್ಳಬೇಕು. ವಿದ್ಯುತ್ ವಾಹನಗಳು ಮಾಲಿನ್ಯವನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡುತ್ತವೆ. ಇದರೊಂದಿಗೆ ಮರಗಳ ಸಂಖ್ಯೆ ಹೆಚ್ಚಾದರೆ 2040ಕ್ಕೆ ನಿಜಾರ್ಥದಲ್ಲಿ ಬೆಂಗಳೂರನ್ನು ಉದ್ಯಾನ ನಗರಿಯನ್ನಾಗಿ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಧ್ಯಾಹ್ನದವರೆಗೆ ನಡೆದ ‘ಕೃತಕ ಬುದ್ಧಿಮತ್ತೆ(ಎ.ಐ.) ಯುಗದಲ್ಲಿ ಕೆಲಸ ಮತ್ತು ಕೆಲಸದ ಸ್ಥಳಗಳ ಮರುವ್ಯಾಖ್ಯಾನ’, ‘ಭವಿಷ್ಯದ ಮೆಟ್ರೊಗಾಗಿ ಮಾನಸಿಕ ಸ್ವಾಸ್ಥ್ಯ’, ‘ನಿರ್ಮಾಣ ಬೆಂಗಳೂರು: ಆಡಳಿತ, ನಗರ ಯೋಜನೆ ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಪಾತ್ರ’ ಗೋಷ್ಠಿಗಳಲ್ಲಿ ವಿವಿಧ ವಿಷಯ ತಜ್ಞರು ವಿಚಾರ ಮಂಡಿಸಿದರು.
ಪರಿಸರ ಪೂರಕ ನಗರ ನಿರ್ಮಾಣ
ನಾಡಪ್ರಭು ಕೆಂಪೇಗೌಡರು ಪೇಟೆ ಕಟ್ಟುವುದರ ಜೊತೆಗೆ ಉದ್ಯಾನಗಳನ್ನು ಕೆರೆಗಳನ್ನು ಕಟ್ಟಿದ್ದರು. ಪರಿಸರಕ್ಕೆ ಪೂರಕವಾಗಿ ನಗರ ಇರಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ಅದನ್ನು ಮುಂದುವರಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ವಿಡಿಯೊ ರೆಕಾರ್ಡಿಂಗ್ ಮೂಲಕ ಕಳುಹಿಸಿದ ಸಂದೇಶದಲ್ಲಿ ಅವರು ‘ಮರಗಳನ್ನು ಉಳಿಸಿಕೊಂಡು ಉದ್ಯಾನಗಳನ್ನು ಬೆಳೆಸಿಕೊಂಡು ಕೆರೆಗಳನ್ನು ಸ್ವಚ್ಛವಾಗಿ ಕಾಪಾಡಿಕೊಂಡು ಹೋಗುವುದೇ ನಮ್ಮ ಗುರಿ’ ಎಂದು ಹೇಳಿದರು.
‘ಜಾಗತಿಕ ಹೂಡಿಕೆದಾರರ ಸಮಾವೇಶದ ಮೂಲಕ ₹10.27 ಲಕ್ಷ ಕೋಟಿ ಹೂಡಿಕೆಯು ರಾಜ್ಯಕ್ಕೆ ಹರಿದು ಬರುವ ಒಪ್ಪಂದವಾಗಿದೆ. 6 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಎಲ್ಲರನ್ನೂ ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯೇ ನಮ್ಮ ಉದ್ದೇಶ’ ಎಂದು ತಿಳಿಸಿದರು.
‘ನಮ್ಮ ಮೆಟ್ರೊ’ ಸಂಪರ್ಕ ಇನ್ನಷ್ಟು ವಿಸ್ತರಣೆಯಾಗುತ್ತಿದೆ. ಉಪನಗರ ರೈಲು ಯೋಜನೆ ತಯಾರಾಗುತ್ತಿದೆ. ನಗರದಾದ್ಯಂತ ಕಾವೇರಿ ನೀರು ಒದಗಿಸಲಾಗುತ್ತಿದೆ. ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ದೇವನಹಳ್ಳಿಯಲ್ಲಿ 407 ಎಕರೆಯಲ್ಲಿ ಗ್ಲೋಬಲ್ ಹಬ್ ನಿರ್ಮಿಸಲಾಗುವುದು. 2033ಕ್ಕೆ ಬೆಂಗಳೂರಿನಲ್ಲಿ ಇನ್ನೊಂದು ವಿಮಾನ ನಿಲ್ದಾಣ ಕಾರ್ಯಾಚರಣೆ ಮಾಡಲಿದೆ ಎಂದು ವಿವರಿಸಿದರು. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳು ಜನರ ವಿಶ್ವಾಸವನ್ನು ಉಳಿಸಿಕೊಂಡಿರುವ ಮಾಧ್ಯಮಗಳಾಗಿವೆ. ಜನರ ಧ್ವನಿಯಾಗಿ ಕೆಲಸ ಮಾಡುತ್ತಾ ಸಮಾಜ ಸ್ವಾಸ್ಥ್ಯ ಕಾಪಾಡುತ್ತಿವೆ ಎಂದು ಶ್ಲಾಘಿಸಿದರು.
ಗೋಷ್ಠಿಗಳಲ್ಲಿ ಕೇಳಿದ್ದು...
ಎ.ಐ. (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವುದಕ್ಕೆ ಪೂರಕವೇ ಹೊರತು ಅದೇ ಎಲ್ಲ ಅಲ್ಲ. ಶಿಕ್ಷಣವೇ ಎಲ್ಲದಕ್ಕಿಂತ ಮುಖ್ಯ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಎಲ್ಲ ಕಡೆಯಿಂದ ಪ್ರತಿಭೆಗಳನ್ನು ಆಕರ್ಷಿಸುತ್ತಿದೆ. ಈ ಪ್ರತಿಭೆಗಳಿಗೆ ಕೌಶಲವೂ ದೊರೆತರೆ ಮಾದರಿ ಬೆಂಗಳೂರು ನಿರ್ಮಾಣಗೊಳ್ಳಲಿದೆ.–ಶರತ್ ಕುಮಾರ್ ಬಚ್ಚೇಗೌಡ ಕಿಯೋನಿಕ್ಸ್ ಅಧ್ಯಕ್ಷ
ಮಾನಸಿಕ ಆರೋಗ್ಯದ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವ ಮೂಲಕ ಜನರಿಗೆ ಮಾಹಿತಿ ದೊರೆಯುವಂತೆ ಮಾಡುವುದು ಉತ್ತಮ ವಿಚಾರ. ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆ ತೆಗೆದುಕೊಳ್ಳಲು ಜನರಿಗೆ ಹಿಂಜರಿಕೆ ಇರುವುದಿಲ್ಲ. ಆದರೆ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಜನರು ಮುಂದಾಗುವುದಿಲ್ಲ. ನಾವು ಅದಕ್ಕಾಗಿ ಜಿಲ್ಲೆಗಳಲ್ಲಿ ಮಾತ್ರವಲ್ಲ ಪ್ರತಿ ತಾಲ್ಲೂಕುಗಳಲ್ಲಿ ಗ್ರಾಮಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಚಿಕಿತ್ಸೆ ದೊರೆಯುವಂತೆ ಮಾಡಿದ್ದೇವೆ.–ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಜಗತ್ತಿನ ಎಲ್ಲ ಮಹಾನ್ ನಗರಗಳಲ್ಲಿ ವಾಹನದಟ್ಟಣೆಯ ಸಮಸ್ಯೆ ಇದೆ. ಬೆಂಗಳೂರಿನಲ್ಲಿ ಮಾತ್ರ ಈ ಸಮಸ್ಯೆ ಇದೆ ಎಂಬಂತೆ ನಾವು ಮಾತನಾಡುತ್ತಿದ್ದೇವೆ. 1.5 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ ಕಡಿಮೆ ಜನಸಂಖ್ಯೆ ಇರುವ ನಗರಗಳನ್ನು ಹೋಲಿಸಿ ನೋಡಬಾರದು. ವಾಹನದಟ್ಟಣೆಯನ್ನು ಕಡಿಮೆ ಮಾಡಲು ಕರ್ನಾಟಕ ಸರ್ಕಾರವು ಕ್ರಾಂತಿಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಸುರಂಗ ಮಾರ್ಗ ಸಹಿತ ಹಲವು ಉಪಕ್ರಮಗಳನ್ನು ಕೈಗೆತ್ತಿಕೊಂಡಿದೆ. ಬಿಡಿಎ ಬಿಬಿಎಂಪಿಯಂಥ ಸಂಸ್ಥೆಗಳು ಮೂಲಸೌಕರ್ಯಗಳನ್ನು ಕಲ್ಪಿಸುತ್ತಿವೆ.–ಎನ್.ಎ. ಹ್ಯಾರಿಸ್ ಬಿಡಿಎ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.