ADVERTISEMENT

ಡಿಎಚ್ ಬೆಂಗಳೂರು 2040 ಶೃಂಗ: 'ಶಿಕ್ಷಣ ವ್ಯವಸ್ಥೆ ಬಗ್ಗೆ ಅವಲೋಕನ ಅಗತ್ಯ'

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 10:35 IST
Last Updated 20 ಫೆಬ್ರುವರಿ 2026, 10:35 IST
<div class="paragraphs"><p>‘ಡಿಎಚ್ ಬೆಂಗಳೂರು 2040 ಶೃಂಗ’</p></div>

‘ಡಿಎಚ್ ಬೆಂಗಳೂರು 2040 ಶೃಂಗ’

   

ಬೆಂಗಳೂರು: ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಶಾಂಗ್ರಿಲಾ ಹೋಟೆಲ್‌ನಲ್ಲಿ ಇಂದು ನಡೆಯುತ್ತಿರುವ ‘ಡಿಎಚ್ ಬೆಂಗಳೂರು 2040 ಶೃಂಗ’ದಲ್ಲಿ ಎಐ ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು.

‘ಕೃತಕ ಬುದ್ಧಿಮತ್ತೆ ಎನ್ನುವುದು ಸಮಾಜದ ಪ್ರತಿಯೊಂದು ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ. ಅದರಲ್ಲೂ ಶಿಕ್ಷಣ ವ್ಯವಸ್ಥೆ ಮೇಲೆ ಎಐ ಭಾರಿ ಪರಿಣಾಮ ಬೀರಿದೆ. ಇದರಿಂದ ಸಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಬಗ್ಗೆ ಗಂಭೀರ ಅವಲೋಕನ ತೀರಾ ಅಗತ್ಯ’ ಎಂಬ ಒಮ್ಮತ ಅಭಿಪ್ರಾಯ ಚರ್ಚೆಯಲ್ಲಿ ಮೂಡಿತು.

ADVERTISEMENT

ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಐಐಎಂಬಿ ನಿರ್ದೇಶಕ ಯು. ದಿನೇಶ್ ಕುಮಾರ್ ಅವರು, ‘ಎಐ ಒಂದು ರೀತಿ ಕಾರು ಇದ್ದ ಹಾಗೆ. ಡೆಟಾ ಎಂಬುದು ಇಂಧನ ಇದ್ದ ಹಾಗೆ. ನಾವು ಕಲಬೆರಕೆ ಇಂಧನ ಕೊಟ್ಟರೆ ಕಾರು ಹೇಗೆ ಕೆಡುತ್ತದೋ, ಅದೇ ರೀತಿ ಕಲಬೆರಕೆ ಡೆಟಾ ಬಳಸುವ ಎಐ’ ಎಂದು ಎಚ್ಚರಿಸಿದರು.

‘ಯಾವುದೇ ಎಐ ಮಾಡೆಲ್, ತನಗೆ ಗೊತ್ತಿಲ್ಲ ಎಂದು ಹೇಳುವುದಿಲ್ಲ. ಎಲ್ಲ ತಿಳಿದಿದೆ ಎಂಬ ಭರವಸೆಯೊಂದಿಗೇ ಮಾಹಿತಿ ನೀಡುತ್ತದೆ. ಆದರೆ, ಅಪಾಯಕಾರಿ’ ಎಂದೂ ಹೇಳಿದರು.

‘ಶಿಕ್ಷಣ ವ್ಯವಸ್ಥೆಗೆ ಎಐ ಇನ್ಮುಂದೆ ಅವಿಭಾಜ್ಯ ಅಂಗವಾಗಿರಲಿದೆ. ಭಾರತದಂತಹ ಸಂಪ್ರದಾಯಿಕ ದೇಶಗಳ ಶಿಕ್ಷಣ ವ್ಯವಸ್ಥೆಯನ್ನೂ ಇದು ಆಮೂಲಾಗ್ರ ಬದಲಾಯಿಸಿದೆ ಮತ್ತು ಬದಲಾಯಿಸಲಿದೆ’ ಎಂದು ಅವರು ಹೇಳಿದರು.

ಎಂ.ಎಸ್. ರಾಮಯ್ಯ ವಿವಿಯ ನಿರ್ದೇಶಕ ಗುರುಚರಣ್ ಗೊಳ್ಳೇಕೆರೆ ಮಾತನಾಡಿ, ಈ ಹಿಂದೆ ಅನೇಕ ವಿದ್ಯಾರ್ಥಿಗಳು ತುಂಬಾ ಸೃಜನಶೀಲರಾಗಿ ಇರುತ್ತಿದ್ದನ್ನು ನಾನು ನೋಡುತ್ತಿದ್ದೆ. ಆದರೆ, ಇಂದಿನ ವಿದ್ಯಾರ್ಥಿಗಳು ಸೃಜನಶೀಲತೆಯನ್ನೇ ಕಳೆದುಕೊಳ್ಳುತ್ತಿದ್ದಾರೆಂಬುದನ್ನು ನಾನು ಕಂಡುಕೊಂಡಿದ್ದೇನೆ. ಅವರು ಹೆಚ್ಚೆಚ್ಚು ಎಐಗೆ ಅಂಟಿಕೊಳ್ಳುತ್ತಿದ್ದಾರೆ. ಇದು ಬೇಸರ ಮೂಡಿಸುತ್ತದೆ. ಆದರೆ, ಬದಲಾವಣೆಯನ್ನು ನಾವು ಒಪ್ಪಿಕೊಳ್ಳಲೇಬೇಕು ಎಂದು ಹೇಳಿದರು.

ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ದಿನೇಶ್ ಕುಮಾರ್, ಎಐ ಮಾಡೆಲ್‌ಗಳ ಅಳವಡಿಕೆಯಲ್ಲಿ ಭಾರತದ ಖಾಸಗಿ ಶಿಕ್ಷಣ ಸಂಸ್ಥೆಗಳು ನಾಗಾಲೋಟದಲ್ಲಿದ್ದರೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಶಾಲೆಗಳು ಭಾರಿ ಹಿಂದುಳಿದಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಪತ್ರಕರ್ತ ಗೌತಮ್ ಮಾಚಯ್ಯ ಗೋಷ್ಠಿ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.