ADVERTISEMENT

ಕರಗ: ಅರ್ಚಕರ ನಿಯುಕ್ತಿಯಲ್ಲಿ ಲೋಪ

ಹೆಚ್ಚುವರಿ ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ * ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 19:12 IST
Last Updated 19 ಮಾರ್ಚ್ 2019, 19:12 IST
ಕರಗದ ನೋಟ
ಕರಗದ ನೋಟ   

ಬೆಂಗಳೂರು: ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದ 2019ರ ಕರಗ ಉತ್ಸವದ ಅರ್ಚಕರನ್ನಾಗಿ
ಎ.ಜ್ಞಾನೇಂದ್ರ ಅವರನ್ನು ನಿಯುಕ್ತಿಗೊಳಿಸಲು ಬೆಂಗಳೂರು ನಗರ ಹೆಚ್ಚುವರಿ ಜಿಲ್ಲಾಧಿಕಾರಿ ಅನುಮತಿ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಅರ್ಚಕರನ್ನು ನೇಮಿಸುವ ವಿಷಯದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಭಾಗಶಃ ನ್ಯಾಯಾಂಗದ ಅಧಿಕಾರ ಹೊಂದಿದ್ದಾರೆ. ಆದರೆ, ಅವರು ನಿಯಮಗಳನ್ನು ಪಾಲಿಸದೇ ಹಲವು ಆರೋಪ ಹೊಂದಿರುವ ಎ.ಜ್ಞಾನೇಂದ್ರ ಅವರನ್ನು ಅರ್ಚಕರನ್ನಾಗಿ ನಿಯುಕ್ತಿಗೊಳಿಸಲು ಅನುಮತಿ ನೀಡಿದ್ದಾರೆ. ಆ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ’ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

‘ಖಾಲಿ ಹುದ್ದೆಗಳ ಭರ್ತಿ ಮಾಡುವ ವಿಷಯದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಅಭಿಪ್ರಾಯ ತಿಳಿಸುವ ಅಧಿಕಾರ ಹೊಂದಿದ್ದಾರೆ. ಅದರಲ್ಲೂ ಈಗಾಗಲೇ ಇಬ್ಬರು ಅರ್ಚಕರನ್ನು ಪರಿವೀಕ್ಷಣಾ ಅವಧಿಗಾಗಿ ನೇಮಿಸಲಾಗಿದೆ. ಅವರನ್ನೇ ಪುನರ್ ನೇಮಿಸಲು ಕಾಯ್ದೆಯಲ್ಲಿ ಅವಕಾಶ ಇರುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ಎ.ಜ್ಞಾನೇಂದ್ರ ಅವರ ವಿರುದ್ಧ ಸಾರ್ವಜನಿಕರ ದೂರುಗಳಿವೆ. ಅವರ ಮೇಲೆ ಯಾವುದೇ ಆರೋಪ ಇಲ್ಲದಿದ್ದಲ್ಲಿ ಅವರನ್ನು ನೇಮಿಸಬೇಕು. ಒಂದು ವೇಳೆ ಆರೋಪ ಸಾಬೀತಾದಲ್ಲಿ ಎನ್‌.ಮನು ಅವರನ್ನು ಕರಗೋತ್ಸವ ನಡೆಸಲು ಅರ್ಹತೆ ಬಗ್ಗೆ ಪರಿಶೀಲಿಸುವಂತೆ ಮುಜುರಾಯಿ ಇಲಾಖೆಯ ಸಹಾಯಕ ಆಯುಕ್ತರು ತಿಳಿಸಿದ್ದಾರೆ’.

‘ಅರ್ಚಕರ ನೇಮಕದ ಬಗ್ಗೆ ಮುಜರಾಯಿ ಇಲಾಖೆ ರಚಿಸಿದ್ದ ವ್ಯವಸ್ಥಾಪನಾ ಸಮಿತಿ ನೀಡಿದ್ದ ಅಭಿಪ್ರಾಯ ಹಾಗೂ ನಿವೃತ್ತ ನ್ಯಾಯಾಧೀಶರ ಇಲಾಖಾ ಮೇಲ್ವಿಚಾರಣಾ ಸಮಿತಿಯ ವರದಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಗಣನೆಗೆ ತೆಗೆದುಕೊಂಡಿಲ್ಲ. ನೇರವಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಪತ್ರ ಬರೆದು ಗುಪ್ತ ಮಾಹಿತಿ ಕೋರಿರುವುದು ಅಧಿಕಾರ ವ್ಯಾಪ್ತಿಗೆ ವಿರುದ್ಧ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಹೆಚ್ಚುವರಿ ಜಿಲ್ಲಾಧಿಕಾರಿ, ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ, ಹಲಸೂರು ಗೇಟ್ ಠಾಣೆ ಇನ್‌ಸ್ಪೆಕ್ಟರ್ ಅವರೆಲ್ಲ ಚಾಲ್ತಿಯಲ್ಲಿರುವ ಕಾನೂನುಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ತನಿಖೆಗೆ ಆದೇಶಿಸಬೇಕಾಗಿ ಕೋರುತ್ತೇನೆ’ ಎಂದು ಪಿ.ಆರ್. ರಮೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.