ADVERTISEMENT

ಮಧುಮೇಹಕ್ಕೆ ಆರೋಗ್ಯ ಮಿಷನ್ ಅಡಿ ಇನ್ಸುಲಿನ್

ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 19:39 IST
Last Updated 1 ಮಾರ್ಚ್ 2020, 19:39 IST
ಹೂ ಕೊಡುವ ಮೂಲಕ ಮಕ್ಕಳು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕೆ.ಎಸ್.ನವೀನ್ ಹಾಗೂ ಸದಸ್ಯರು ಇದ್ದರು –ಪ್ರಜಾವಾಣಿ ಚಿತ್ರ
ಹೂ ಕೊಡುವ ಮೂಲಕ ಮಕ್ಕಳು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕೆ.ಎಸ್.ನವೀನ್ ಹಾಗೂ ಸದಸ್ಯರು ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಯೋಜನೆ ಯಡಿ ಮಧುಮೇಹ ಕಾಯಿಲೆಗೆ ಇನ್ಸುಲಿನ್‌ ಔಷಧ ಕೊಡಿಸುವ ಚಿಂತನೆ ಇದೆ’ ಎಂದು ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ಟೈಪ್‌–1 ಡಯಾಬಿಟಿಸ್‌ ಫೌಂಡೇ ಷನ್ ಆಫ್ ಇಂಡಿ‌ಯಾ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಧುಮೇಹ ಕುರಿತಂತೆ ಪರಿಣಾಮಕಾರಿ ಸಮೀಕ್ಷೆಗಳಿಂದ ಮಾಹಿತಿ ಸಂಗ್ರಹಿಸಿ, ಡಿಜಿಟಲೀಕರಣಗೊಳಿಸಬೇಕು. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ವ್ಯಾಪ್ತಿಯಲ್ಲಿ ಇದು ಸೇರಿರದ ಕಾರಣ ಆರೋಗ್ಯ ಮಿಷನ್‌ನಡಿ ಸೇರಿಸುವ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ಮಧುಮೇಹ ಸದ್ದಿಲ್ಲದೆ ಕೊಲ್ಲುವ ಕಾಯಿಲೆ.ವಯಸ್ಕರನ್ನು ಮಾತ್ರವಲ್ಲದೆ ಮಕ್ಕಳಲ್ಲೂ ಈ ಸಮಸ್ಯೆ ಕಾಡುತ್ತಿರುವುದು ಆತಂಕಕಾರಿ. ಈ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕು. ಭ್ರಷ್ಟಾಚಾರಕ್ಕಿಂತ ಅನಾರೋಗ್ಯ ದೊಡ್ಡ ಪಿಡುಗು. ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಪ್ರಾಧಿಕಾರ ರಚಿಸುವ ಅಗತ್ಯವಿದೆ’ ಎಂದರು.

ಪ್ರತಿಷ್ಠಾನದ ಸಂಸ್ಥಾಪನಾ ಮುಖ್ಯಸ್ಥ ಕೆ.ಎಸ್.ನವೀನ್,‘ವಿಶ್ವದಲ್ಲೇ ಅತಿ ಹೆಚ್ಚು ಮಧುಮೇಹ ಕಾಯಿಲೆ ಉಳ್ಳವರ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ವರದಿಯೊಂದರ ಪ್ರಕಾರ ರಾಜ್ಯದ 3ಲಕ್ಷಕ್ಕೂ ಅಧಿಕ ಮಕ್ಕಳಲ್ಲಿ ಮಧುಮೇಹ ಪತ್ತೆಯಾಗಿದೆ. ಇದರ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಬಡವರಿಗೆ ಹೊರೆಯಾಗುತ್ತಿದೆ. ಚಿಕಿತ್ಸೆಗೆ ಸರ್ಕಾರದಿಂದಲೇ ನೆರವು ನೀಡಬೇಕು’ ಎಂದು ಒತ್ತಾಯಿಸಿದರು.

‘ಟೈಪ್- 1 ಮಧುಮೇಹ ಸಮಸ್ಯೆಗಳನ್ನು ಸರ್ಕಾರಗಳ ಗಮನಕ್ಕೆ ತಂದು, ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ದೇಶದ ಉದ್ದಗಲಕ್ಕೂ ಇರುವ ಡಯಾಬಿಟಿಸ್‌ ಕೇಂದ್ರಗಳನ್ನು ಒಗ್ಗೂಡಿಸಿ ಈ ಪ್ರತಿಷ್ಠಾನ ಸ್ಥಾಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.