ADVERTISEMENT

ಮಣಿಪಾಲ್ ಆಸ್ಪತ್ರೆ: ಡಯಾಲಿಸಿಸ್ ಘಟಕಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 16:00 IST
Last Updated 2 ಡಿಸೆಂಬರ್ 2022, 16:00 IST
ಡಯಾಲಿಸಿಸ್ ಘಟಕವನ್ನು ಸಪ್ತಮಿ ಗೌಡ ಉದ್ಘಾಟಿಸಿದರು. ಆಸ್ಪತ್ರೆ ನಿರ್ದೇಶಕ ಡಾ. ಮನೀಶ್ ರೈ ಹಾಗೂ ಡಾ. ಸುದರ್ಶನ್ ಬಲ್ಲಾಳ್ ಇದ್ದಾರೆ.
ಡಯಾಲಿಸಿಸ್ ಘಟಕವನ್ನು ಸಪ್ತಮಿ ಗೌಡ ಉದ್ಘಾಟಿಸಿದರು. ಆಸ್ಪತ್ರೆ ನಿರ್ದೇಶಕ ಡಾ. ಮನೀಶ್ ರೈ ಹಾಗೂ ಡಾ. ಸುದರ್ಶನ್ ಬಲ್ಲಾಳ್ ಇದ್ದಾರೆ.   

ಬೆಂಗಳೂರು: ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ನಿರ್ಮಿಸಲಾಗಿರುವ 38 ಹಾಸಿಗೆಗಳ ಅತ್ಯಾಧುನಿಕ ಡಯಾಲಿಸಿಸ್ ಘಟಕಕ್ಕೆ ಶುಕ್ರವಾರ ಚಾಲನೆ ದೊರೆಯಿತು.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಲನಚಿತ್ರ ನಟಿ ಸಪ್ತಮಿ ಗೌಡ ಅವರು ಘಟಕವನ್ನು ಉದ್ಘಾಟಿಸಿ, ಮಾತನಾಡಿದರು. ‘ಈ ಹಿಂದೆ ಮೂತ್ರಪಿಂಡ ಸಮಸ್ಯೆಗೆ ಒಳಗಾದವರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದರು. ಈಗ ತಂತ್ರಜ್ಞಾನದ ನೆರವಿನಿಂದ ಚಿಕಿತ್ಸೆ ಸುಲಭವಾಗಿದೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಡಯಾಲಿಸಿಸ್‌ಗೆ ಕಾಯುವುದನ್ನು ತಪ್ಪಿಸಲು ಈ ಘಟಕ ಸಹಕಾರಿಯಾಗಲಿದೆ’ ಎಂದು ಹೇಳಿದರು.

ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್, ‘ಆಸ್ಪತ್ರೆಯಲ್ಲಿ ಪ್ರತಿನಿತ್ಯ ಸುಮಾರು 140 ರೋಗಿಗಳು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ. ದೇಶದಲ್ಲಿ ಪ್ರತಿವರ್ಷ ಶೇ 10ರಷ್ಟು ಮಂದಿ ಮೂತ್ರಪಿಂಡ ವೈಫಲ್ಯಕ್ಕೆ ಒಳಪಡುತ್ತಿದ್ದಾರೆ. ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿರುವವರಲ್ಲಿ ಶೇ 90ರಷ್ಟು ಮಂದಿ ಸರಿಯಾದ ಚಿಕಿತ್ಸೆ ಸಿಗದೆಯೇ ಮೃತಪಡುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಮೂತ್ರಪಿಂಡ ಸಮಸ್ಯೆ ಇರುವವರಿಗೆ ವಾರಕ್ಕೆಮೂರು ಸಲ ಡಯಾಲಿಸಿಸ್ ಮಾಡಬೇಕಾಗುತ್ತದೆ.ಮಧುಮೇಹದಿಂದ ಬಳಲುತ್ತಿರುವವರು ಅಧಿಕ ಸಂಖ್ಯೆಯಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗುತ್ತಿದ್ದಾರೆ.ಆದ್ದರಿಂದ ಮಧುಮೇಹದ ಬಗ್ಗೆ ಎಚ್ಚರ ವಹಿಸಬೇಕು. ಧೂಮಪಾನ ಸೇರಿ ವಿವಿಧ ವ್ಯಸನದಿಂದ ದೂರ ಉಳಿಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.