ADVERTISEMENT

ವಿಶೇಷ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಕ್ರಮ: ಹಾಲಪ್ಪ ಆಚಾರ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 4:37 IST
Last Updated 30 ಅಕ್ಟೋಬರ್ 2022, 4:37 IST
ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್ ಅವರು ಕೈ ಕುಲುಕಿದಾಗ ವಾಕ್‌ ಶ್ರವಣ ದೋಷದ ಮಕ್ಕಳು ಪುಳಕಿತರಾದರು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್ ಅವರು ಕೈ ಕುಲುಕಿದಾಗ ವಾಕ್‌ ಶ್ರವಣ ದೋಷದ ಮಕ್ಕಳು ಪುಳಕಿತರಾದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರತಿ 5 ವರ್ಷಗಳಿಗೊಮ್ಮೆ ವಿಶೇಷ ಶಾಲೆಗಳಿಗೆ ಶಿಶು ಕೇಂದ್ರೀಕೃತ ಸಹಾಯಧನ ಯೋಜನೆಯನ್ವಯ ನೀಡುತ್ತಿರುವ ಅನುದಾನ ಏರಿಕೆ ಮಾಡಲು ಕಾನೂನು ರಚನೆ ಸೇರಿದಂತೆ ವಿಶೇಷ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘ, ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾವೇಶ ‘ಸ್ಪಂದನ–2022’ ಉದ್ಘಾಟಿಸಿ ಅವರು ಮಾತನಾಡಿದರು.

‘ಬುದ್ಧಿಮಾಂದ್ಯರು, ಮಾತುಬಾರದ ಮತ್ತು ಕಿವಿ ಕೇಳದ ಮಕ್ಕಳನ್ನು ಆರೈಕೆ ಮಾಡುವುದು ಅತ್ಯಂತ ಕಷ್ಟದ ಕೆಲಸ. ಅದನ್ನು ಮಾಡುತ್ತಿರುವ ವಿಶೇಷ ಶಿಕ್ಷಕರು ಮಹಾತಾಯಿ ಹೃದಯದವರು. ಇಂತಹ ಶಿಕ್ಷಕರ ವೇತನವನ್ನು ಶೇ 50ರಷ್ಟು ಹೆಚ್ಚಳ ಮಾಡಲಾಗಿದ್ದು, ಇತರ ಬೇಡಿಕೆಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ’ ಎಂದರು.

ADVERTISEMENT

‘ಸರ್ಕಾರದ ಯೋಜನೆಗಳನ್ನು ಕಿಂಚಿತ್ತೂ ಲೋಪ ಆಗದಂತೆ ಫಲಾನುಭವಿಗೆ ತಲುಪಿಸುವುದು ಪುಣ್ಯದ ಕೆಲಸ. ಈ ಕೆಲಸವನ್ನು ಪ್ರಾಮಾಣಿಕತೆಯಿಂದ ಸಿಬ್ಬಂದಿ ಮಾಡಬೇಕು. ಸೋರಿಕೆ ಅಥವಾ ಯಾವುದೇ ಲೋಪದ ಬಗ್ಗೆ ಮಾಹಿತಿ ಇದ್ದರೆ ನನಗೆ ತಲುಪಿಸಿ. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಜತೆಗೆ ವ್ಯವಸ್ಥೆ ಸರಿಪಡಿಸಲಾಗುವುದು’ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಕೆಲ ಸಿಬ್ಬಂದಿಗೆ ₹1.50 ಲಕ್ಷ ಸಂಬಳ ಇದ್ದರೆ, ಮತ್ತೆ ಕೆಲವರಿಗೆ ₹15 ಸಾವಿರ ಇದೆ. ಈ ರೀತಿಯ ತಾರತಮ್ಯ ಏಕೆ ಎಂಬುದು ಅರ್ಥವೇ ಆಗದ ವಿಷಯ. ಸದ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಈ ತಾರತಮ್ಯ ಸರಿಪಡಿಸುವ ಕೆಲಸ ಆಗಬೇಕಿದೆ. ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡೋಣ’ ಎಂದರು.

ಶಿಕ್ಷಕರಿಗೆ ನೀಡುತ್ತಿರುವ ವೇತನವನ್ನು ಶೇ 50ರಷ್ಟು ಹೆಚ್ಚಳ ಮಾಡಲು ಶ್ರಮ ವಹಿಸಿದ ಸಚಿವ ಹಾಲಪ್ಪ ಆಚಾರ್ ಮತ್ತು ಇಲಾಖೆಯ ನಿರ್ದೇಶಕಿ ಕೆ.ಎಸ್.ಲತಾಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಶಾಲಾ ಮಕ್ಕಳು ನಡೆಸಿದ ನೃತ್ಯ ಮತ್ತು ನಾಟಕಗಳು ಜನರ ಮನೆ ಗೆದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.