ADVERTISEMENT

ಅಗೆದು ಹಾಕಿದ ರಸ್ತೆ: ಸಂಚಾರಕ್ಕೆ ಸಂಚಕಾರ

ರಾಜಕುಮಾರ್‌ ರಸ್ತೆಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ವೈಟ್‌ ಟಾಪಿಂಗ್ ಕಾಮಗಾರಿ

ಬಾಲಕೃಷ್ಣ ಪಿ.ಎಚ್‌
Published 18 ಏಪ್ರಿಲ್ 2025, 19:41 IST
Last Updated 18 ಏಪ್ರಿಲ್ 2025, 19:41 IST
ರಾಜಕುಮಾರ್ ರಸ್ತೆಯನ್ನು ಅಗೆದು ಹಾಕಿರುವುದರಿಂದ ಪ್ರಕಾಶ್‌ನಗರ ಕಡೆ ಮನೆ ಇರುವವರು ಸುತ್ತು ಹಾಕಿ ಹೋಗಬೇಕು. ಇಲ್ಲದೇ ಇದ್ದರೇ ಪೈಪ್‌ ಮೇಲೆ ಕಾಲಿಟ್ಟು ದಾಟಿ ಸಾಗುವಂತಾಗಿದೆ
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ರಾಜಕುಮಾರ್ ರಸ್ತೆಯನ್ನು ಅಗೆದು ಹಾಕಿರುವುದರಿಂದ ಪ್ರಕಾಶ್‌ನಗರ ಕಡೆ ಮನೆ ಇರುವವರು ಸುತ್ತು ಹಾಕಿ ಹೋಗಬೇಕು. ಇಲ್ಲದೇ ಇದ್ದರೇ ಪೈಪ್‌ ಮೇಲೆ ಕಾಲಿಟ್ಟು ದಾಟಿ ಸಾಗುವಂತಾಗಿದೆ ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ವಿವಿಧ ಜಿಲ್ಲೆಗಳಿಂದ ನಗರ ಪ್ರವೇಶಿಸುವ ವಾಹನಗಳು ಮೆಜೆಸ್ಟಿಕ್‌ ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ರಾಜಕುಮಾರ್‌ ರಸ್ತೆಯಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಸಲು ರಾಜಾಜಿನಗರ ಪ್ರವೇಶ ವೃತ್ತದ ಕಡೆಯಿಂದ ನವರಂಗ್‌ ವೃತ್ತದವರೆಗೆ ರಸ್ತೆಯನ್ನು ಅಗೆದು ಹಾಕಿ ತಿಂಗಳು ಕಳೆದರೂ ಮುಚ್ಚಿಲ್ಲ. ಇದರಿಂದ ಸರಾಗ ವಾಹನ ಸಂಚಾರಕ್ಕೆ ತೊಡುಕುಂಟಾಗಿದೆ. ಅಂಗಡಿ, ಹೋಟೆಲ್ ವ್ಯಾಪಾರಸ್ಥರಿಗೂ ಸಮಸ್ಯೆಯಾಗಿದೆ.

ಬಿಬಿಎಂಪಿಯಿಂದ ವೈಟ್‌ ಟಾಪಿಂಗ್‌ ಕಾಮಗಾರಿ, ಜಲಮಂಡಳಿಯಿಂದ ಒಳಚರಂಡಿ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಜೊತೆಗೆ ಮಳೆನೀರು ಚರಂಡಿಯನ್ನೂ ನಿರ್ಮಿಸಲಾಗುತ್ತಿದೆ. ರಾಮೇಶ್ವರಂ ಕೆಫೆ ಕಡೆಯಿಂದ ರಸ್ತೆ ಬದಿಯಲ್ಲಿ ಅಗೆದು ಪೈಪ್‌ ಹಾಕಿ ಮುಚ್ಚಿದ್ದಾರೆ. ನವರಂಗ್‌ ಸರ್ಕಲ್‌ನಿಂದ ಮುಂದಕ್ಕೆ ನೆಲ ಅಗೆದು ಹಾಗೆ ಬಿಡಲಾಗಿದೆ. 

ಕೆಲವು ಒಳ ರಸ್ತೆಗಳಿಂದ ಈ ರಸ್ತೆಯನ್ನು ಸಂಪರ್ಕಿಸುವ ಜಾಗದಲ್ಲಿ ಅಗೆದಿರುವುದರಿಂದ ಅಲ್ಲೆಲ್ಲ ವಾಹನಗಳು ಸುತ್ತಿಬಳಸಿ ಹೋಗಬೇಕಿದೆ. ಪ್ರಕಾಶನಗರ, ಗಾಯತ್ರಿನಗರ, ಸುಬ್ರಹ್ಮಣ್ಯ ನಗರದ ಜನರು ದೂಳಿನಿಂದ ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

‘80 ಅಡಿ ಅಗಲ ಇರುವ ರಾಜಕುಮಾರ್ ರಸ್ತೆಯಲ್ಲಿ ಒಂದೇ ಒಂದು ಗುಂಡಿ ಇರಲಿಲ್ಲ. ಆದರೂ, ಅಭಿವೃದ್ಧಿ ಹೆಸರಲ್ಲಿ ಅಗೆದು ಹಾಕಿದ್ದಾರೆ. ಪ್ರಭಾವಿಗಳಿಗೆ ನೀರು ಒದಗಿಸಲು ಇರುವ ರಸ್ತೆಯನ್ನು ಅಗೆದು ಹಾಳು ಮಾಡಿದ್ದಾರೆ. ಒಂದು ತಿಂಗಳಿಗೂ ಅಧಿಕ ಸಮಯದಿಂದ ದೂಳು ತಿನ್ನುತ್ತಿದ್ದೇವೆ. ಅಂಗಡಿ, ಹೋಟೆಲ್‌, ಬೇಕರಿಗಳಿಗೆ ಹೋಗುವಂತಿಲ್ಲ. ಎಲ್ಲ ಕಡೆ ದೂಳು ತುಂಬಿದೆ. ಈಗ ಮಳೆ ಬರುತ್ತಿರುವುದರಿಂದ ದೂಳು ಕಡಿಮೆಯಾಗಿದೆ. ಆದರೆ, ಮಳೆ ಹೆಚ್ಚಾದರೆ ಕೆಸರಲ್ಲಿ ಕಾಲು ಇಡುವುದು ಕಷ್ಟವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ವಾಹನಗಳನ್ನು ಪಾರ್ಕಿಂಗ್‌ ಮಾಡಲು ಸಾಧ್ಯವಾಗದ ಕಾರಣ, ಜನಸಂಚಾರವೇ ಕಡಿಮೆಯಾಗಿದೆ’ ಎಂದು ಇಲ್ಲಿನ ವ್ಯಾಪಾರಸ್ಥರು ದೂರಿದರು.

‘ವಿವಿಧ ಭಾಗಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಳಚರಂಡಿ ಕೊಳವೆ ಅಳವಡಿಕೆ, ಮಳೆನೀರಿನ ಚರಂಡಿ ನಿರ್ಮಾಣ ಸಹಿತ ಮೂಲ ಅವಶ್ಯಕತೆಗಳೊಂದಿಗೆ ಕಾಮಗಾರಿ ನಡೆಸಬೇಕಿರುವುದರಿಂದ ಹೆಚ್ಚು ಸಮಯ ಬೇಕಾಗುತ್ತದೆ. ಒಳಚರಂಡಿ, ಚರಂಡಿ, ಯುಟಿಲಿಟಿ ಪೈಪ್‌ ಅಳವಡಿಸುವ ಕೆಲಸ ಮುಗಿದ ಬಳಿಕ ಕಾಂಕ್ರೀಟ್‌ ಹಾಕಿದ ನಂತರ, ಪಾದಚಾರಿ ಮಾರ್ಗ ನಿರ್ಮಾಣ ಕಾರ್ಯ ನಡೆಯಲಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಗೆದು ಹಾಕಿರುವ ಮಣ್ಣಲ್ಲಿ ಸಿಲುಕಿರುವ ಆಟೊವನ್ನು ತಳ್ಳಿ ಮುಂದಕ್ಕೆ ಒಯ್ಯಲಾಯಿತು ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.