ಕೆ.ಆರ್.ಪುರ: ಕಾಡುಗೋಡಿ ಪ್ಲಾಂಟೇಷನ್‌ನ ದಿನ್ನೂರಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕೈಗೊಂಡಿರುವ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಚರಣೆ ವಿರುದ್ಧ ಮಹದೇವಪುರ ಕ್ಷೇತ್ರದ ದಿನ್ನೂರು ಗ್ರಾಮಸ್ಥರು ಹಾಗೂ ವಿವಿಧ ರೈತ, ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು.
‘ಅಧಿಕಾರಿಗಳು ನೋಟೀಸ್ ನೀಡದೆ ಅರಣ್ಯ ಭೂಮಿ ಎಂದು ಕೃಷಿ ಜಮೀನುಗಳನ್ನು ಪೊಲೀಸರ ರಕ್ಷಣೆಯಲ್ಲಿ ಜೆಸಿಬಿ ಬಳಸಿ ಕಸಿದುಕೊಳ್ಳಲು ಮುಂದಾಗಿದ್ದಾರೆ’ ಎಂದು ಗ್ರಾಮಸ್ಥರು ಕಿಡಿಕಾರಿದರು.
‘ಜಿಲ್ಲಾಧಿಕಾರಿಯಾಗಿದ್ದ ಲಿಂಗಯ್ಯನವರು ಕಾಡುಗೋಡಿ ಸಾಮೂಹಿಕ ಸಹಕಾರ ಸಂಘದ ಮೂಲಕ ದಲಿತ ಕುಟುಂಬಗಳಿಗೆ ತಲಾ ಮೂರರಿಂದ ನಾಲ್ಕು ಎಕರೆಯಂತೆ ಜಮೀನು ಮಂಜೂರು ಮಾಡಿದ್ದರು. ಆದರೆ ಈಗ ಜಮೀನಿನ ಮೌಲ್ಯ ಹೆಚ್ಚಾಗಿರುವುದರಿಂದ ಒತ್ತುವರಿ ನೆಪದಲ್ಲಿ ಭೂಮಿ ಕಸಿದುಕೊಂಡು ಭೂ ಮಾಫಿಯಾಗೆ ನೀಡಲು ಹುನ್ನಾರ ನಡೆಸಲಾಗಿದೆ’ ಎಂದು ಸಾಮಾಜಿಕ ಹೋರಾಟಗಾರ ಎಂ.ಆರ್.ರಫಿಕ್ ದೂರಿದರು.
‘ಮೂರು ತಲೆಮಾರುಗಳಿಂದ ದಿನ್ನೂರಿನಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ನಮಗೆ ಆಧಾರವಾಗಿರುವ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಮೂಲಕ ಕಿತ್ತುಕೊಳ್ಳಲು ಹುನ್ನಾರ ನಡೆಸಲಾಗಿದೆ’ ಎಂದು ಸ್ಥಳೀಯ ಡಿಎಸ್ಎಸ್ ರಾಜು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.