ಬೆಂಗಳೂರು: ‘ಅಂಗವಿಕಲರಿಗೆ ಕೆಲಸ ಇಲ್ಲವೇ ಜೀವನಾವಶ್ಯಕ ಭತ್ಯೆ ಕೊಡಬೇಕು’ ಎನ್ನುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಅಂಗವಿಕಲರು ಪ್ರತಿಭಟನೆ ನಡೆಸಿದರು.
‘ಏಳು ರೀತಿಯ ಅಂಗವೈಕಲ್ಯ ಇರುವ ಆರೈಕೆದಾರರಿಗೆ ರಾಜ್ಯ ಸರ್ಕಾರವು ಮಾಸಿಕ ₹ 1000 ಪ್ರೋತ್ಸಾಹಧನ ನೀಡಿರುವುದು ಸ್ವಾಗತಾರ್ಹ. ಇದನ್ನು ₹3000ಕ್ಕೆ ಏರಿಸಬೇಕು. ಮಾಸಿಕ ಪಿಂಚಣಿ ಈಗಲೂ ₹1400 ಇದೆ. ಇದರಲ್ಲಿ ಕೇಂದ್ರದ ಪಾಲು ಬರೀ ₹300 ಮಾತ್ರ. 15 ವರ್ಷದಿಂದ ಪಿಂಚಣಿ ಏರಿಕೆಯಾಗದೇ ಅಂಗವಿಕಲರಿಗೆ ತೊಂದರೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಆಂಧ್ರದಲ್ಲಿ ಮಾಸಿಕ ₹ 6000, ತೆಲಂಗಾಣದಲ್ಲಿ ₹4000, ದೆಹಲಿ, ಹರಿಯಾಣದಲ್ಲಿ ₹3000 ಪಿಂಚಣಿ ದೊರೆಯುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ₹5000 ನೀಡಿ ಮಾಸಿಕ ಪಿಂಚಣಿಯನ್ನು ₹10 ಸಾವಿರ ಏರಿಕೆ ಮಾಡಬೇಕು. ರಾಜಸ್ಥಾನದ ಮಾದರಿಯಲ್ಲಿ ವಾರ್ಷಿಕ ಶೇ 15ರಷ್ಟು ಹೆಚ್ಚಳದ ಪಿಂಚಣಿ ಹಕ್ಕು ಕಾಯಿದೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.
ಪಂಚಾಯಿತಿಗಳಲ್ಲಿ ಮೀಸಲಿಟ್ಟಿರುವ ಅಂಗವಿಕಲರ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಬಸ್ ಪಾಸ್ ರಾಜ್ಯದಾದ್ಯಂತ ವಿಸ್ತರಿಸಬೇಕು. ಅಂಗವಿಕಲರನ್ನು ಮದುವೆಯಾದರೆ ನೀಡುವ ಪ್ರೋತ್ಸಾಹಧನ ಹೆಚ್ಚಿಸಬೇಕು. ಉಚಿತ ಆರೋಗ್ಯ ಸೇವೆ ನೀಡಬೇಕು ಎಂದು ಒತ್ತಾಯಿಸಿದರು.
ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ ಟಿ.ರಾಘವೇಂದ್ರ ಹಾಗೂ ರಾಜ್ಯ ಅಂಗವಿಕಲರ ಹಕ್ಕುಗಳ ಸಮಿತಿಯ ಆಯುಕ್ತ ದಾಸ್ ಸೂರ್ಯವಂಶಿ ಅವರು ಪ್ರತಿಭಟನಕಾರರ ಮನವಿ ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.
ಇದಕ್ಕೆ ಒಪ್ಪದ ಒಕ್ಕೂಟದ ಪ್ರತಿನಿಧಿಗಳು, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಆಗಮಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಅನಾರೋಗ್ಯದಿಂದ ಬರಲು ಆಗುತ್ತಿಲ್ಲ. ಭರವಸೆ ಈಡೇರಿಸಲು ಕ್ರಮ ವಹಿಸುವುದಾಗಿ ಸಚಿವರು ದೂರವಾಣಿ ಮೂಲಕ ತಿಳಿಸಿದರು. ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಒಕ್ಕೂಟದ ಅಧ್ಯಕ್ಷ ಜಿ.ಎನ್.ನಾಗರಾಜ್, ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್, ಕಾರ್ಯದರ್ಶಿ ಯಶಸ್ವಿ, ವೆಂಕಟೇಶ್, ಅರ್ಪುದ ರಾಜನ್ ಹಾಜರಿದ್ದರು.
Quote - ಒಕ್ಕೂಟದ ಪ್ರತಿನಿಧಿಗಳನ್ನು ಕರೆಯಿಸಿ ಮಾತುಕತೆ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ. ಆನಂತರವೂ ಕ್ರಮ ಆಗದೇ ಇದ್ದರೆ ಡಿಸೆಂಬರ್ 3ರ ವಿಶ್ವ ಅಂಗವಿಕಲರ ದಿನವನ್ನು ಬಹಿಷ್ಕರಿಸಿ ಕಪ್ಪು ಪಟ್ಟಿ ಹೋರಾಟ ಮಾಡುತ್ತೇವೆ ಜಿ.ಎನ್.ನಾಗರಾಜ್ ಒಕ್ಕೂಟದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.