ಬೆಂಗಳೂರು: ನಗರದ ಸಜ್ಜನ್‌ರಾವ್ ಸರ್ಕಲ್‌ನಲ್ಲಿದ್ದ ಸರ್ ಎಂ.ವಿ. ವಿಶ್ವೇಶ್ವರಯ್ಯ ಅವರ ಪುತ್ಥಳಿಯನ್ನು ಬಿಬಿಎಂಪಿ ತೆರವುಗೊಳಿಸಿದ್ದು, ವೇದಿಕೆಯನ್ನು ಧ್ವಂಸಗೊಳಿಸಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿ.ವಿ. ಪುರಂ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಶನ್ ಪದಾಧಿಕಾರಿಗಳು ಪೊಲೀಸ್ ಉಪ ಆಯುಕ್ತರಿಗೆ ದೂರು ನೀಡಿದ್ದಾರೆ.
ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯ ಮಂಜೂರಾತಿ ಪಡೆದು 2006ರಲ್ಲಿ ಪುತ್ಥಳಿ ನಿರ್ಮಿಸಲಾಗಿತ್ತು. ರಾಜ್ಯಪಾಲರು ಅನಾವರಣಗೊಳಿಸಿದ್ದರು. ಅಂದಿನಿಂದ ಪ್ರತಿವರ್ಷ ಸೆ.15ಕ್ಕೆ ಎಂಜಿನಿಯರ್ ದಿನವನ್ನು ಇಲ್ಲಿ ಆಚರಿಸಲಾಗುತ್ತಿತ್ತು. ಶನಿವಾರ ಇದ್ದಕ್ಕಿದ್ದಂತೆ ತೆರವುಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪುತ್ಥಳಿಯ ಹಿಂಭಾಗದಲ್ಲಿರುವ ಭಾರತ್ ಗ್ಯಾಸ್ ಏಜೆನ್ಸಿಯವರ ಅನುಕೂಲಕ್ಕಾಗಿ ಈ ರೀತಿ ಧ್ವಂಸಗೊಳಿಸಿದ್ದಾರೆ. ಇದರಿಂದ ಸಾರ್ವಜನಿಕರ ಭಾವನೆಗೆ ಧಕ್ಕೆಯಾಗಿದೆ. ಸಾರ್ವಜನಿಕ ಆಸ್ತಿ ಹಾನಿ ಮಾಡಿದ್ದಕ್ಕಾಗಿ ಹಾಗೂ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಸಂಬಂಧಪಟ್ಟವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಸೋಸಿಯೇಶನ್ ಅಧ್ಯಕ್ಷ ಎಸ್. ವೆಂಕಟೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.
ಅಭಿವೃದ್ಧಿಗಾಗಿ ತೆರವು: ವಿ.ವಿ. ಪುರ ಫುಡ್‌ಸ್ಟ್ರೀಟ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ ಎಂ.ವಿ. ವಿಶ್ವೇಶ್ವರಯ್ಯ ಅವರ ಪುತ್ಥಳಿಯನ್ನು ಅಲ್ಲಿಂದ ತೆಗೆದು ಸಂರಕ್ಷಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೆ ಅಳವಡಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರಿಗೆ ಈ ಬಗ್ಗೆ ಮಾಹಿತಿ ಇಲ್ಲ. ‘ಏನಾಗಿದೆ ಎಂದು ಪರಿಶೀಲಿಸುತ್ತೇನೆ’ ಎಂದು ವಲಯ ಆಯುಕ್ತೆ ವಿನೋತ್ ಪ್ರಿಯಾ ಆರ್. ಪ್ರತಿಕ್ರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.