ADVERTISEMENT

777 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿದ ಸಚಿವ ಜಮೀರ್‌ ಅಹಮದ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 15:41 IST
Last Updated 10 ಜೂನ್ 2025, 15:41 IST
ಮಾದಾರ ಚನ್ನಯ್ಯ ಕೊಳೆಗೇರಿಯ ಶರಣಯ್ಯ ಅವರ ಶೆಡ್‌ನಲ್ಲಿ ಜಮೀರ್ ಅಹಮದ್, ಪ್ರಸಾದ್‌ ಅಬ್ಬಯ್ಯ ಅವರು ಊಟ ಮಾಡಿದರು.
ಮಾದಾರ ಚನ್ನಯ್ಯ ಕೊಳೆಗೇರಿಯ ಶರಣಯ್ಯ ಅವರ ಶೆಡ್‌ನಲ್ಲಿ ಜಮೀರ್ ಅಹಮದ್, ಪ್ರಸಾದ್‌ ಅಬ್ಬಯ್ಯ ಅವರು ಊಟ ಮಾಡಿದರು.   

ಬೆಂಗಳೂರು: ಹಲವು ವರ್ಷಗಳಿಂದ ದಾಖಲೆ ಇಲ್ಲದೆ ವಾಸಿಸುತ್ತಿದ್ದ 777 ಕುಟುಂಬಗಳಿಗೆ ವಸತಿ ಸಚಿವ ಜಮೀರ್‌ ಅಹಮದ್‌  ಅವರು ಮಂಜೂರಾತಿ ಪತ್ರ ಹಾಗೂ ಹಕ್ಕುಪತ್ರಗಳನ್ನು ಮಂಗಳವಾರ ವಿತರಿಸಿದರು.

ಯಶವಂತಪುರ, ರಾಜರಾಜೇಶ್ವರಿನಗರ, ಯಲಹಂಕ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಹಕ್ಕಿಪಿಕ್ಕಿ, ಅಲೆಮಾರಿ ಸಮುದಾಯ, ಲೈಂಗಿಕ ಕಾರ್ಯಕರ್ತೆಯರು, ಕುಷ್ಠ ರೋಗದಿಂದ ಗುಣಮುಖರಾದವರಿಗೆ ಹಕ್ಕುಪತ್ರ ನೀಡಿದರು.

ಯಶವಂತಪುರದ ಯಲಚಗುಪ್ಪೆಯ ಹಕ್ಕಿಪಿಕ್ಕಿ ಕಾಲೊನಿಯಲ್ಲಿ 228 ಕುಟುಂಬಗಳಿಗೆ ಹಾಗೂ ಮಾದಿಗರ ಚನ್ನಯ್ಯ ಕೊಳೆಗೇರಿಯಲ್ಲಿ 259 ಮಂದಿಗೆ ಹಕ್ಕುಪತ್ರ, ಲೈಂಗಿಕ ಕಾರ್ಯಕರ್ತೆಯರು ಹಾಗೂ ಅಲೆಮಾರಿ ಸಮುದಾಯದ 200 ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರ ನೀಡಲಾಯಿತು.

ADVERTISEMENT

ಯಲಹಂಕದ ಗಿಡ್ಡೇನಹಳ್ಳಿ ಗ್ರಾಮದ ಬಿಕೆ ಕೊಳೆಗೇರಿಯಲ್ಲಿ 40 ಕುಟುಂಬ ಹಾಗೂ ರಾಜರಾಜೇಶ್ವರಿ ನಗರದ ಮಾತಾಪುರ ದಲಿತ ಕಾಲೊನಿಯಲ್ಲಿ ಕುಷ್ಠ ರೋಗದಿಂದ ಗುಣಮುಖರಾದ 50 ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರಗಳನ್ನು ಜಮೀರ್‌ ಅಹಮದ್‌ ವಿತರಿಸಿದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಶಾಸಕ ಎಸ್. ಟಿ ಸೋಮಶೇಖರ್, ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಅಶೋಕ್, ಮುಖ್ಯ ಎಂಜಿನಿಯರ್‌ ಸುಧೀರ್, ತಾಂತ್ರಿಕ ಸಲಹೆಗಾರ ಬಾಲರಾಜ್ ಉಪಸ್ಥಿತರಿದ್ದರು.

ಶೆಡ್‌ನಲ್ಲಿ ಊಟ: ಯಶವಂತಪುರದ ಯಲಚಗುಪ್ಪೆ ಗ್ರಾಮದ ಮಾದಾರ ಚನ್ನಯ್ಯ ಕೊಳೆಗೇರಿಯಲ್ಲಿ ಮನೆ ಮಂಜೂರಾತಿ ಪತ್ರ ವಿತರಿಸಿದ ವಸತಿ ಸಚಿವ ಜಮೀರ್ ಅಹಮದ್ ಅವರು ಅಲೆಮಾರಿ ಸಮುದಾದಯ ಶರಣಯ್ಯ ಅವರ ಶೆಡ್‌ನಲ್ಲಿ ಊಟ ಮಾಡಿದರು.

ಶೆಡ್‌ನಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಆದಷ್ಟು ಶೀಘ್ರ ಶಾಶ್ವತ ವಸತಿ ವ್ಯವಸ್ಥೆ ಕಲ್ಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಸಚಿವರು ನಮ್ಮ ಶೆಡ್‌ನಲ್ಲಿ ಊಟ ಮಾಡಿದ್ದು ನಮ್ಮ ಭಾಗ್ಯ. ನಾವು ಪ್ರೀತಿಯಿಂದ ಮಾಡಿದ್ದ ಅಡುಗೆಯನ್ನೇ ಬಡಿಸುವಂತೆ ಕೇಳಿ, ಊಟ ಮಾಡಿದರು. ನಮಗೆ ತುಂಬಾ ಸಂತಸವಾಯಿತು’ ಎಂದು ಶರಣಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.