ADVERTISEMENT

ನಟಿ ದಿವ್ಯಾ ಸುರೇಶ್ ಕಾರು ಬೈಕ್‌ಗೆ ಡಿಕ್ಕಿ | ಮಹಿಳೆಗೆ ಗಾಯ: ಪೊಲೀಸರಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 15:38 IST
Last Updated 24 ಅಕ್ಟೋಬರ್ 2025, 15:38 IST
ದಿವ್ಯಾ ಸುರೇಶ್‌
ದಿವ್ಯಾ ಸುರೇಶ್‌   

ಬೆಂಗಳೂರು: ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ದಿವ್ಯಾ ಸುರೇಶ್‌ ಅವರು ಸಂಚರಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದು, ನಟಿಯ ವಿರುದ್ಧ ಬ್ಯಾಟರಾಯನಪುರ ಸಂಚಾರ ಠಾಣೆಗೆ ದೂರು ನೀಡಲಾಗಿದೆ.

ಅಕ್ಟೋಬರ್‌ 4ರ ರಾತ್ರಿ 1.30ಕ್ಕೆ ಬ್ಯಾಟರಾಯನಪುರದ ಎಂ.ಎಂ.ರಸ್ತೆಯಲ್ಲಿ ದಿವ್ಯಾ ಅವರು ಕಾರಿನಲ್ಲಿ ತೆರಳುತ್ತಿದ್ದರು. ಆ ವೇಳೆ ಮುಂದೆ ಚಲಿಸುತ್ತಿದ್ದ ಬೈಕ್‌ಗೆ ಕಾರು ಹೊಡೆದಿದೆ. ಆದರೆ, ಅವರು ಕಾರನ್ನು ನಿಲುಗಡೆ ಮಾಡದೇ ಪರಾರಿ ಆಗಿದ್ದರು ಎಂದು ದೂರಲಾಗಿದೆ.

ಬೈಕ್‌ನಲ್ಲಿದ್ದ ಮಹಿಳೆಯ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿವ್ಯಾ ಅವರ ವಿರುದ್ಧ ಮಹಿಳೆಯ ಸಂಬಂಧಿ ಕಿರಣ್ ಅವರು ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ನಟಿಯಿಂದ ವಿವರಣೆ ಪಡೆದ ಪೊಲೀಸರು:

ಕಿರಣ್ ನೀಡಿದ ದೂರು ಆಧರಿಸಿ, ಆ ಮಾರ್ಗದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಲಾಯಿತು. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕರನ್ನು ಪತ್ತೆ ಮಾಡಲಾಯಿತು. ದಿವ್ಯಾ ಅವರಿಂದ ಘಟನೆ ಕುರಿತು ವಿವರಣೆ ಪಡೆದುಕೊಳ್ಳಲಾಗಿದೆ. ಕಾರನ್ನು ಜಪ್ತಿ ಮಾಡಲಾಗಿತ್ತು. ದಿವ್ಯಾ ಅವರು ಕಾರನ್ನು ಬಿಡಿಸಿಕೊಂಡು ಹೋಗಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.

ದೂರಿನಲ್ಲಿ ಏನಿದೆ:?

‘ಅನುಷಾ ಅವರಿಗೆ ಅನಾರೋಗ್ಯವಿದ್ದ ಕಾರಣಕ್ಕೆ ಗಿರಿನಗರದ ಆಸ್ಪತ್ರೆಗೆ ತೆರಳುತ್ತಿದ್ದವು. ಬೈಕ್‌ನಲ್ಲಿ ಮಧ್ಯೆ ಅನುಷಾ ಕುಳಿತಿದ್ದರೆ, ನಾನು ಬೈಕ್ ಚಲಾಯಿಸುತ್ತಿದ್ದೆ, ಬೈಕ್ ಹಿಂದೆ ಅನಿತಾ ಅವರು ಕುಳಿತಿದ್ದರು. ಈ ವೇಳೆ ಬ್ಯಾಟರಾಯನಪುರದ ಎಂ.ಎಂ.ರಸ್ತೆ ಬಳಿ ನಾಯಿ ಬೊಗಳಿದ್ದಕ್ಕೆ ಸ್ವಲ್ಪ ಬಲಕ್ಕೆ ಬೈಕ್‌ ತಿರುಗಿಸಿದ್ದೆ. ಕಾರು, ಅನಿತಾ ಅವರ ಕಾಲಿಗೆ ಡಿಕ್ಕಿ ಹೊಡೆದಿತ್ತು. ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರು ರಸ್ತೆಗೆ ಬಿದ್ದಿದ್ದೆವು. ಅನಿತಾ ಅವರ ಕಾಲಿಗೆ ಪೆಟ್ಟಾಗಿತ್ತು. ದಿವ್ಯಾ ಅವರು ಕಾರು ನಿಲ್ಲಿಸದೇ ಪರಾರಿಯಾಗಿದ್ದರು. ನಂತರ ಅನಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು’ ಎಂದು ಕಿರಣ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.   

ಅನಿತಾ ಅವರಿಗೆ ಶಸ್ತ್ರ ಚಿಕಿತ್ಸೆಗೆ ₹2 ಲಕ್ಷ ಖರ್ಚಾಗಿದೆ. ದಿವ್ಯಾ ಸುರೇಶ್ ಅವರು ಗಾಯಾಳು ಅನಿತಾ ಅವರನ್ನು ಸಂಪರ್ಕಿಸಿಲ್ಲ ಎಂದು ಕಿರಣ್ ಆರೋಪಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.