ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 2023ರಲ್ಲೇ ಮುಖ್ಯಮಂತ್ರಿ ಆಗಬೇಕಿತ್ತು. ಮುಂದೆಯಾದರೂ ಆಗಲಿ...’
ಹೀಗೆ ಹೇಳಿದವರು ಸಾಹಿತಿಗಳಾದ ಕರೀಗೌಡ ಬೀಚನಹಳ್ಳಿ ಮತ್ತು ಎಲ್.ಎನ್.ಮುಕುಂದರಾಜ್.
ಕೆ.ಎಂ.ರಘು ರಚಿಸಿರುವ ಡಿ.ಕೆ.ಶಿವಕುಮಾರ್ ಜೀವನಗಾಥೆಯ ಕೃತಿ ಜನಾರ್ಪಣೆ ಸಮಾರಂಭದಲ್ಲಿ ಅವರ ನಾಯಕತ್ವ, ವ್ಯಕ್ತಿತ್ವ ಕುರಿತು ಚರ್ಚಿಸುತ್ತಲೇ ಅವರು ಈ ರೀತಿ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ‘ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ವಿಶ್ವಾಸವಿದೆ. ನಮ್ಮಲ್ಲಿ ಭವಿಷ್ಯ ಕೇಳುವ, ಅದನ್ನು ನಂಬುವ ಪರಿಪಾಠವಿದೆ. ಮುಖ್ಯಮಂತ್ರಿ ಆಗುವ ಭವಿಷ್ಯದ ಮಾತು ನಿಜ ಆಗಬಹುದು. ಏಕೆಂದರೆ ಅವರಿಗೆ ಜನರ ಆಶೀರ್ವಾದವಿದೆ’ ಎಂದು ಹೇಳಿದರು.
‘2019ರಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸುವ ಪ್ರಯತ್ನ ನಡೆದಾಗ ಅದನ್ನು ತಡೆಯಲು ಗಟ್ಟಿಯಾಗಿ ನಿಂತವರು ಶಿವಕುಮಾರ್. ಎಚ್.ಡಿ.ಕುಮಾರಸ್ವಾಮಿ ಪ್ರಯತ್ನವನ್ನೇ ಮಾಡಲಿಲ್ಲ. ಆ ನಂತರ ಶಿವಕುಮಾರ್ ಅವರನ್ನು ತುಳಿಯುವ ಕೆಲಸ ನಡೆದರೂ ಪಕ್ಷ ನಿಷ್ಠೆಯನ್ನು ಬಿಡಲಿಲ್ಲ. ಅವರನ್ನು ಪ್ರಮುಖ ಸ್ಥಾನದಲ್ಲಿ ನೋಡುವ ಕನಸು ಈಡೇರಲಿ’ ಎಂದು ತಿಳಿಸಿದರು.
‘ಹಿಂದೆಲ್ಲಾ ರಾಜಕೀಯ ನಾಯಕರಿಗೆ ಸಾಹಿತಿಗಳ ಒಡನಾಟವಿತ್ತು. ಅನಂತಮೂರ್ತಿ, ಲಂಕೇಶ್ ಸಹಿತ ಹಲವರೊಂದಿಗೆ ಗೋಪಾಲಗೌಡರ ನಂಟು ಬರಹ ರೂಪ ಪಡೆದಿದೆ. ಪಂಪ, ರನ್ನ ಕೂಡ ಹೀಗೆ ಉತ್ತಮ ಸಂಬಂಧ ಹೊಂದಿದ್ದವರೇ. ಇವರ ಬರಹಗಳಿಂದ ರಾಜಕೀಯ ನೇತಾರರ ವ್ಯಕ್ತಿತ್ವ ಹೇಗಿತ್ತು ಎಂದು ತಿಳಿಯಲು ಸಹಕಾರಿಯಾಗಲಿದೆ’ ಎಂದು ಹೇಳಿದರು.
ಸಾಹಿತಿ ಕರೀಗೌಡ ಬೀಚನಹಳ್ಳಿ ಮಾತನಾಡಿ, ‘ಒಕ್ಕಲಿಗ ಸಮುದಾಯದ ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದರು. ಎಚ್.ಕೆ.ವೀರಣ್ಣಗೌಡ, ಕರಿಯಪ್ಪ ಅವರಿಗೆ ಈ ಅವಕಾಶ ತಪ್ಪಿತು. ಕನಕಪುರ ಭಾಗದವರೇ ಆದ ಶಿವಕುಮಾರ್ ಅವರಿಗೂ ಅವಕಾಶ ಸಿಗುತ್ತದೆ’ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ‘ನಾನು ಪುಸ್ತಕ ಓದಿದವನಲ್ಲ. ರಾಜಕಾರಣವೇ ನನ್ನ ಬದುಕು ಆಗಿದೆ. ನಂಬಿದ ಸಿದ್ಧಾಂತ, ಜಾತ್ಯತೀತ ತತ್ವವನ್ನು ಬಿಟ್ಟುಕೊಟ್ಟವನಲ್ಲ. ನನ್ನ ಜೀವನಗಾಥೆಯನ್ನು ರಘು ಕೃತಿಯಲ್ಲಿ ಬಿಡಿಸಿಟ್ಟಿದ್ದಾರೆ. ನ.6ರಂದು ‘ನೀರಿನ ಹೆಜ್ಜೆ’ ಎನ್ನುವ ನನ್ನ ಪುಸ್ತಕ ಬಿಡುಗಡೆಯಾಗುತ್ತಿದೆ. ಆ ನಂತರ ‘ಗಾಂಧಿ ಭಾರತ’ ಕೃತಿಯನ್ನು ಹೊರ ತರುವೆ’ ಎಂದು ಹೇಳಿದರು.
ಸಾಹಿತಿ ಚಂದ್ರಶೇಖರ ಕಂಬಾರ, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್, ಲೇಖಕಿ ಕೆ.ಷರೀಫಾ, ಭಕ್ತರಹಳ್ಳಿ ಕಾಮರಾಜ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.