ADVERTISEMENT

ಹಳ್ಳಿ ಬದುಕಿನ ಪಠ್ಯಕ್ರಮ ರೂಪಿಸಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ರೈತಸಂತೆ, ರೈತ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 22:04 IST
Last Updated 27 ಡಿಸೆಂಬರ್ 2025, 22:04 IST
ರೈತ ದಿನಾಚರಣೆಯಲ್ಲಿ ಪ್ರಗತಿಪರ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. ಡಿ.ಕೆ. ಶಿವಕುಮಾರ್‌, ಎನ್‌. ಚಲುವರಾಯಸ್ವಾಮಿ, ಎಸ್‌.ವಿ.ಸುರೇಶ ಭಾಗವಹಿಸಿದ್ದರು
ರೈತ ದಿನಾಚರಣೆಯಲ್ಲಿ ಪ್ರಗತಿಪರ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು. ಡಿ.ಕೆ. ಶಿವಕುಮಾರ್‌, ಎನ್‌. ಚಲುವರಾಯಸ್ವಾಮಿ, ಎಸ್‌.ವಿ.ಸುರೇಶ ಭಾಗವಹಿಸಿದ್ದರು   

ಯಲಹಂಕ: ನಗರದ ವಿದ್ಯಾರ್ಥಿಗಳಿಗೆ ಹಳ್ಳಿ ಬದುಕಿನ ಬಗ್ಗೆ ಅರಿವು ಮೂಡಿಸಲು ಪಠ್ಯಕ್ರಮ ರೂಪಿಸಬೇಕು. ಈ ಬಗ್ಗೆ ಕೃಷಿ ಸಚಿವರು ಹಾಗೂ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳು ರೂಪುರೇಷೆ ಸಿದ್ಧಪಡಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದರು.

ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ರೈತಸಂತೆ ಹಾಗೂ ರೈತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜಸ್ಥಾನ ಬಿಟ್ಟರೆ ಕರ್ನಾಟಕದಲ್ಲೇ ಹೆಚ್ಚು ಕೃಷಿ ಭೂಮಿ ಇದೆ. ಕೃಷಿಗೆ ಉತ್ತೇಜನ ನೀಡಲು ನಮ್ಮ ಸರ್ಕಾರ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಪೂರೈಸುತ್ತಿದೆ. ಇದಕ್ಕಾಗಿ ವಾರ್ಷಿಕ ₹20 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಕೆರೆಗೆ ‌ನೀರು ತುಂಬಿಸುವ ಯೋಜನೆಯ ವಿದ್ಯುತ್ ಬಿಲ್ ಮೊತ್ತ ₹ 3 ಸಾವಿರ ಕೋಟಿ ಕಟ್ಟಬೇಕಿದೆ. ರೈತರಿಗೆ ಹಲವಾರು ಸಂಕಟಗಳು ಬರುತ್ತಿರುತ್ತವೆ. ನಾವು ಅದನ್ನು ಸವಾಲಾಗಿ ಸ್ವೀಕರಿಸಿ ಬಗೆಹರಿಸುತ್ತೇವೆ’ ಎಂದರು.

ADVERTISEMENT

‘ರೈತ ಸಂತೆಯಲ್ಲಿ ಒಂದು ಪ್ಯಾಕೆಟ್ ಅಣಬೆಗೆ ₹50 ಇದ್ದು, ಇದೇ ಅಣಬೆಯನ್ನು ಮಾಲ್‌ಗಳಲ್ಲಿ ₹250ಕ್ಕೆ ಮಾರಾಟ ಮಾಡುತ್ತಿದ್ದಾರೆ. ರೈತನಿಂದ ಮಾರುಕಟ್ಟೆಗೆ ತಲುಪುವವರೆಗೆ ಕೈ ಬದಲಾಗುವುದರೊಳಗೆ ಬೆಲೆ ಐದು ಪಟ್ಟು ಹೆಚ್ಚಾಗುತ್ತದೆ. ಈ ದಿಸೆಯಲ್ಲಿ ರೈತರಿಗೆ ನೆರವಾಗಲು ಈ ರೈತಸಂತೆ ಆಯೋಜಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.

ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಮಾತನಾಡಿ, ‘ಕರ್ನಾಟಕವು ಕೃಷಿ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲೇ ಮುಂಚೂಣಿಯಲ್ಲಿದೆ. ಹಲವಾರು ವಿನೂತನ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದೆ. ಇದಕ್ಕೆ ನಮ್ಮ ರೈತರು, ಕೃಷಿ ವಿಶ್ವವಿದ್ಯಾಲಯಗಳು, ವಿಜ್ಞಾನಿಗಳು ಹಾಗೂ ಸಂಶೋಧಕರು ಕಾರಣಕರ್ತರಾಗಿದ್ದಾರೆ. ಕೃಷಿಯು ಭಾರತದಲ್ಲಿ ಕೇವಲ ಉದ್ಯೋಗವಲ್ಲ, ಅದು ಜೀವನಶೈಲಿ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ರೈತನು ಭೂಮಿಯನ್ನು ಹದಮಾಡಿ, ಬೆಳೆಗಳನ್ನು ಬೆಳೆಸಿ, ರಾಷ್ಟ್ರದ ಆಹಾರ ಭದ್ರತೆಯನ್ನು ಕಾಪಾಡುತ್ತಿದ್ದಾನೆ. ಹಸಿವಿಲ್ಲದ ಸಮಾಜವನ್ನು ನಿರ್ಮಿಸುವಲ್ಲಿ ರೈತನ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

60 ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯವು ಆರು ದಶಕಗಳ ಸುದೀರ್ಘ ಅವಧಿಯಲ್ಲಿ 337 ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸಿದ್ದು, ಶೈಕ್ಷಣಿಕ ವರ್ಷ 2026–27ರಿಂದ ಹೊಸ ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ ಎಂದರು.

ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳ 9 ಜಿಲ್ಲೆಗಳ 18 ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್‌.ವಿ.ಸುರೇಶ, ಕುಲಸಚಿವ ಕೆ.ಸಿ. ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ವೈ.ಎನ್‌. ಶಿವಲಿಂಗಯ್ಯ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ.ಎಂ. ಪ್ರಶಾಂತ್‌ ಉಪಸ್ಥಿತರಿದ್ದರು.

‘ಕೋಳಿ ಸಾಕಣೆ ರಬೇತಿ ಪಡೆದಿದ್ದೆ’

‘ನಾನು ಕೂಡ ರೈತನ ಮಗ. ಖುದ್ದಾಗಿ ವ್ಯವಸಾಯ ಮಾಡದಿದ್ದರೂ ನೂರಾರು ಎಕರೆ ಆಸ್ತಿ ಹೊಂದಿದ್ದೇನೆ. ವಿದ್ಯಾರ್ಥಿಯಾಗಿದ್ದಾಗ ಈ ಕೃಷಿ ಕಾಲೇಜಿಗೆ ಬಂದು ಕೋಳಿ ಸಾಕಣೆ ಬಗ್ಗೆ ತರಬೇತಿ ಪಡೆದಿದ್ದೆ. ನಮ್ಮ ಊರಿನಲ್ಲಿ ರೇಷ್ಮೆ ಬೆಳೆಯುತ್ತಿದ್ದೇನೆ’ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ‘ನನ್ನ ತಮ್ಮ ರೇಷ್ಮೆ ನೂಲು ಕಾರ್ಖಾನೆ ಆರಂಭಿಸಿದ್ದಾನೆ. ನಮ್ಮ ಜಮೀನಿನಲ್ಲಿ ವೀಳ್ಯದೆಲೆ ಮೆಣಸು ಹಾಕಿದ್ದೇವೆ. ನಮ್ಮ ಮಗನಿಗೂ ಕೃಷಿ ಬಗ್ಗೆ ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡುತ್ತಿದ್ದೇನೆ. ನನ್ನ ಮಗಳು ಕಾಫಿ ಬೆಳೆಗಾರರ ಮನೆಗೆ ಸೇರಿದ್ದಾಳೆ. ನಮ್ಮ ವ್ಯವಹಾರ ಏನೇ ಇದ್ದರೂ ರೈತರ ಕುಟುಂಬದಲ್ಲಿದ್ದೇವೆ. ನಮಗೆ ರೈತರ ಶ್ರಮದ ಬಗ್ಗೆ ಅರಿವಿದ್ದು ಅವರಿಗೆ ಸಂಬಳ ಪಿಂಚಣಿ ಬಡ್ತಿ ಲಂಚ ಯಾವುದೂ ಇಲ್ಲ’ ಎಂದು ಹೇಳಿದರು.

ರೈತಸಂತೆಗೆ ಉತ್ತಮ ಪ್ರತಿಕ್ರಿಯೆ

ರೈತ ಸಂತೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನೂರಾರು ಕೃಷಿಕರು ಪಾಲ್ಗೊಂಡಿದ್ದರು. ಬೆಳೆದ ಸಸಿ ಹಣ್ಣು-ತರಕಾರಿ ಮಹಿಳೆಯರು ತಯಾರಿಸಿದ ಆಹಾರೋತ್ಪನ್ನಗಳು ಅಮಟೆಕಾಯಿ ಬೆಟ್ಟದ ನೆಲ್ಲಿಕಾಯಿ ತೊಕ್ಕುಗಳಿಂದ ತರಹೇವಾರಿ ಉಪ್ಪಿನಕಾಯಿ ಸಾವಯವ ಬೆಲ್ಲ ಮತ್ತು ಕಬ್ಬು ಅವರೇಕಾಯಿ ಸುಳಿಯುವ ಯಂತ್ರ ಬೇಕರಿ ಪದಾರ್ಥಗಳು ಎರೆಹುಳು ಗೊಬ್ಬರ ನಾಟಿ ಕೋಳಿ ಮೊಟ್ಟೆ ತಿಂಡಿ-ತಿನಿಸುಗಳನ್ನು ಮಾರಾಟ ಮಾಡಿದರು. ಇದರ ಜೊತೆಗೆ ಎತ್ತುಗಳು ಹಸು ಮೇಕೆ-ಕುರಿಗಳ ಪ್ರದರ್ಶನ ರಾಗಿಯ ರಾಶಿಪೂಜೆ ಜನರ ಗಮನ ಸೆಳೆಯಿತು. ಜನರು ಎತ್ತಿನ ಬಂಡಿಯಲ್ಲಿ ಸವಾರಿಮಾಡಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.