ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಗೆ ಅನಸ್ತೇಶಿಯಾ ನೀಡಿ ಕೊಲೆ ಮಾಡಿ ‘ಸಹಜ ಸಾವು’ ಎಂದು ಬಿಂಬಿಸಿದ್ದ ಆರೋಪಿ ಪತಿಯನ್ನು ಕಸ್ಟಡಿಗೆ ಪಡೆದುಕೊಂಡಿರುವ ಮಾರತ್‌ಹಳ್ಳಿ ಪೊಲೀಸರು, ವಿಚಾರಣೆ ತೀವ್ರಗೊಳಿಸಿದ್ದಾರೆ.
ಮನೇನಕೊಳಲು ಅಯ್ಯಪ್ಪಸ್ವಾಮಿ ಲೇಔಟ್ ನಿವಾಸಿ ಡಾ.ಕೃತಿಕಾ ರೆಡ್ಡಿ (28) ಅವರ ಕೊಲೆ ಪ್ರಕರಣದಲ್ಲಿ ಆರೋಪಿ, ಗುಂಜೂರಿನ ನಿವಾಸಿ ಡಾ.ಜಿ.ಎಸ್.ಮಹೇಂದ್ರ ರೆಡ್ಡಿ (31) ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನ್ಯಾಯಾಲಯದ ಅನುಮತಿ ಪಡೆದು ಹತ್ತು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ವಿವಿಧ ಆಯಾಮಗಳಲ್ಲಿ ಆರೋಪಿಯ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.
‘ಯಾವ ಕಾರಣಕ್ಕೆ ಕೃತಿಕಾ ಅವರನ್ನು ಕೊಲೆ ಮಾಡಲಾಗಿದೆ? ಮಹೇಂದ್ರ ರೆಡ್ಡಿ ಅವರಿಗೆ ಬೇರೆ ಯುವತಿಯ ಜತೆಗೆ ಸ್ನೇಹವಿತ್ತೇ? ಕೊಲೆಗೆ ಪತ್ನಿಯ ಅನಾರೋಗ್ಯ ಕಾರಣವಾಯಿತೇ? ಅನಸ್ತೇಶಿಯಾವನ್ನು ಆರೋಪಿ ಎಲ್ಲಿಂದ ತಂದಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಈವರೆಗೆ ನಡೆದಿರುವ ವಿಚಾರಣೆಯಿಂದ ಐವಿಯ ಮೂಲಕ ಅನಸ್ತೇಶಿಯಾ ನೀಡಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
‘ಪತ್ನಿಯನ್ನು ಕೊಲೆ ಮಾಡಿದ ಬಳಿಕ ಮಾವ ಕೆ.ಮುನಿರೆಡ್ಡಿ ಅವರ ಮನೆಗೆ ಬಂದಿದ್ದ ಆರೋಪಿ, ಪತ್ನಿಯ ನೆನಪು ಕಾಡುತ್ತಿದೆ ಎಂದು ಹೇಳಿ ಮದುವೆಯ ಸಂದರ್ಭದಲ್ಲಿ ನೀಡಿದ್ದ ಆಭರಣಗಳನ್ನು ಕೊಂಡೊಯ್ದಿದ್ದರು. ಪತ್ನಿಯ ನೆನಪಿಗೆ ಆಭರಣಗಳನ್ನು ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದರು. ಆರೋಪಿಯ ಮಾತು ನಂಬಿದ್ದ ಕೃತಿಕಾ ಕುಟುಂಬಸ್ಥರು ಆಕೆಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನೂ ನೀಡಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರೇಯಿಸಿಗಾಗಿ ಕೊಲೆ?
‘ಆರೋಪಿಗೆ ಯುವತಿಯೊಬ್ಬಳ ಜತೆಗೆ ಸಂಪರ್ಕವಿತ್ತು. ಯಾವುದೋ ಹುಡುಗಿಯ ಜತೆಗೆ ಹೆಚ್ಚಿನ ಸಮಯ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಕೃತಿಕಾ ರೆಡ್ಡಿ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ಮಾಡುತ್ತಿದ್ದರು’ ಎಂದು ಮುನಿರೆಡ್ಡಿ ಆರೋಪಿಸಿದ್ದಾರೆ.
‘ಕೃತಿಕಾ ಮೃತಪಟ್ಟ ದಿನವೇ ಅನುಮಾನ ಬಂದಿತ್ತು. ಅಕ್ಕನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂಬುದಾಗಿ ನಾವು ಒತ್ತಾಯಿಸಿದ್ದೆವು. ಆದರೆ, ಮಹೇಂದ್ರ ರೆಡ್ಡಿ ಅವರು ನಾಟಕ ಮಾಡಿ ಮರಣೋತ್ತರ ಪರೀಕ್ಷೆ ಬೇಡ ಎನ್ನುತ್ತಿದ್ದರು. ಆದರೂ ನಮಗೆ ಅನುಮಾನ ಬಂದು ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿದ್ದೆವು’ ಎಂದು ಕೊಲೆಯಾದ ಕೃತಿಕಾ ಸಹೋದರಿ ನಿಕಿತಾ ಅವರು ತಿಳಿಸಿದ್ದಾರೆ.
‘ಕೃತಿಕಾ ಕ್ಲಿನಿಕ್ ತೆರೆಯುವ ಆಸೆ ಹೊಂದಿದ್ದರು. ಆದರೆ, ಮಹೇಂದ್ರ ರೆಡ್ಡಿ ಯಾವತ್ತೂ ಬೆಂಬಲ ನೀಡಲಿಲ್ಲ. ಮದುವೆಯ ನೋಂದಣಿ ಮಾಡಿಸಲು ಒಪ್ಪಿರಲಿಲ್ಲ. ಅನವಶ್ಯವಾಗಿ ನನಗೆ ಔಷಧಿ ನೀಡುತ್ತಿದ್ದಾರೆಂದು ಅಕ್ಕ ನನಗೆ ತಿಳಿಸಿದ್ದಳು’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.