ಕೊಲೆಯಾದ ಕೃತಿಕಾ ರೆಡ್ಡಿ ಹಾಗೂ ಆರೋಪಿ ಮಹೇಂದ್ರ ರೆಡ್ಡಿ
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿ ಡಾ.ಕೃತಿಕಾ ರೆಡ್ಡಿ ಅವರಿಗೆ ಅನಸ್ತೇಶಿಯಾ ನೀಡಿ ಕೊಲೆ ಮಾಡಿ ‘ಸಹಜ ಸಾವು’ ಎಂಬುದಾಗಿ ಬಿಂಬಿಸಿದ್ದ ಡಾ.ಜಿ.ಎಸ್.ಮಹೇಂದ್ರ ರೆಡ್ಡಿ ಅವರ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿಯ ಬಂಧನದ ಬಳಿಕ ಹೆಚ್ಚಿನ ವಿಚಾರಣೆಗೆಂದು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದ ಮಾರತ್‌ಹಳ್ಳಿ ಠಾಣೆಯ ಪೊಲೀಸರು, ವಿಚಾರಣೆ ನಡೆಸಿ ಗುರುವಾರ ನಗರದ 29ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ‍್ಪಿಸಿದರು. ಬಳಿಕ ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಮೂಲಗಳು ಹೇಳಿವೆ.
‘ಐ.ವಿ ಮೂಲಕ ಪತ್ನಿಗೆ ಅನಸ್ತೇಶಿಯಾ ನೀಡಿ ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕೃತಿಕಾ ರೆಡ್ಡಿ ಅವರು ಪದೇ ಪದೇ ಅನಾರೋಗ್ಯದಿಂದ ಬಳುತ್ತಿದ್ದರು. ಇದರಿಂದ ಬೇಸತ್ತಿದ್ದೆ. ಪತ್ನಿಗೆ ವಿಚ್ಛೇದನ ನೀಡಿದರೆ ಮಾವನ ಮನೆಯಿಂದ ಹಣಕಾಸು ನೆರವು ಹಾಗೂ ಆಸ್ತಿ ಸಿಗುವುದಿಲ್ಲ ಎಂದು ಅನಸ್ತೇಶಿಯಾ ನೀಡಿ ಕೊಲೆಗೆ ಸಂಚು ರೂಪಿಸಿದ್ದೆ. ಪತ್ನಿಯ ಆರೋಗ್ಯ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಕೊಲೆ ಮಾಡಿ ಅದನ್ನು ಸಹಜ ಸಾವು ಎಂದು ಬಿಂಬಿಸಲು ಯೋಜನೆ ಸಿದ್ಧಪಡಿಸಿದ್ದೆ ಎಂಬುದಾಗಿ ಆರೋಪಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಮಹೇಂದ್ರ ರೆಡ್ಡಿ ಅವರ ಮೊಬೈಲ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ತಜ್ಞರು ದತ್ತಾಂಶವನ್ನು ಮರು ಸಂಗ್ರಹಿಸಿದ್ದಾರೆ. ಹಲವು ಮಹತ್ವದ ಸಾಕ್ಷಿಗಳು ದೊರೆತಿವೆ. ಕೃತಿಕಾ ರೆಡ್ಡಿ ಅವರು ಮೃತಪಟ್ಟ ಬಳಿಕ ಸ್ನೇಹಿತರೊಬ್ಬರಿಗೆ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಒಂದು ಹಂತದ ತನಿಖೆ ಪೂರ್ಣವಾಗಿದೆ. ಈ ಪ್ರಕರಣದಲ್ಲಿ ಆದಷ್ಟು ಬೇಗ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ತಿಳಿಸಿದರು.
ಒಂದು ಹಂತದ ತನಿಖೆ ಪೂರ್ಣವಾಗಿದೆ. ಈ ಪ್ರಕರಣದಲ್ಲಿ ಆದಷ್ಟು ಬೇಗ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದುಸೀಮಾಂತ್ಕುಮಾರ್ ಸಿಂಗ್, ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.