ಬೆಂಗಳೂರು: ‘ಆರೋಗ್ಯ ಇಲಾಖೆಯಡಿ ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ವೈದ್ಯರ ವರ್ಗಾವಣೆ ನಡೆಸಲಾಗಿದ್ದು, ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಇಬ್ಬರು ಸ್ತ್ರೀರೋಗ ತಜ್ಞರ ನೇಮಕಕ್ಕೆ ಕ್ರಮ ವಹಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಲಾಖೆಯ ಎಲ್ಲ ವೃಂದದ ಸಿಬ್ಬಂದಿ ಮತ್ತು ನೌಕರರ ಕೌನ್ಸೆಲಿಂಗ್ ವರ್ಗಾವಣೆ ಬಗ್ಗೆ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಎಂಟು ವರ್ಷಗಳ ಬಳಿಕ ವರ್ಗಾವಣೆ ಪ್ರಕ್ರಿಯೆಯನ್ನು ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲಾಗಿದೆ. ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ತಜ್ಞ ವೈದ್ಯರನ್ನು ಒದಗಿಸುವ ಮೂಲಕ ಆಸ್ಪತ್ರೆಗಳ ಬಲವರ್ಧನೆ ಮಾಡಲಾಗಿದೆ. ತಾಯಿ ಮತ್ತು ಮಕ್ಕಳ ಆರೈಕೆಗೆ ಆದ್ಯತೆ ನೀಡಲಾಗಿದ್ದು, ದೀರ್ಘಕಾಲದಿಂದ ಖಾಲಿಯಿದ್ದ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ’ ಎಂದು ಹೇಳಿದರು.
‘ವರ್ಗಾವಣೆ ಪ್ರಕ್ರಿಯೆ ವೇಳೆ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ತ್ರೀರೋಗ, ಅರಿವಳಿಕೆ ಮತ್ತು ಮಕ್ಕಳ ತಜ್ಞರು ಇರುವಂತೆ ಕ್ರಮ ವಹಿಸಲಾಗಿದೆ. ಇದರಿಂದ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ತಗ್ಗಿಸಲು ಸಾಧ್ಯವಾಗುತ್ತದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ 24x7 ವೈದ್ಯರ ಲಭ್ಯತೆಯನ್ನು ಖಾತರಿಪಡಿಸುವ ಉದ್ದೇಶದಿಂದ, ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ ತಲಾ ಇಬ್ಬರು ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಮತ್ತು ಅರಿವಳಿಕೆ ತಜ್ಞರನ್ನು ನೇಮಕ ಮಾಡಲಾಗುತ್ತದೆ. ಈ ಬಗ್ಗೆ ಮುಂದಿನ ವಾರದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು’ ಎಂದು ತಿಳಿಸಿದರು.
ಆದ್ಯತೆ ಮೇರೆಗೆ ನೇಮಕ: ‘ಆರೋಗ್ಯ ಇಲಾಖೆಯಲ್ಲಿ 2 ಸಾವಿರ ಎಂಬಿಬಿಎಸ್ ವೈದ್ಯರು ಹಾಗೂ 185 ತಜ್ಞ ವೈದ್ಯರ ಕೊರತೆ ಇದೆ. ಈ ಕೊರತೆ ನೀಗಿಸಲು ಸರ್ಕಾರಿ ವೈದ್ಯಕೀಯ ಸೀಟು ಪಡೆದು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯಲ್ಲಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಸಂಬಂಧ ಈಗಾಗಲೇ 6 ಸಾವಿರ ಎಂಬಿಬಿಎಸ್ ವೈದ್ಯರು ಹಾಗೂ 119 ತಜ್ಞ ವೈದ್ಯರು ನೋಂದಾಯಿಸಿಕೊಂಡಿದ್ದಾರೆ’ ಎಂದು ಹೇಳಿದರು.
‘ಜೂನ್ 19 ರಿಂದ ಜುಲೈ 3ರವರೆಗೆ ಇಲಾಖೆಯಲ್ಲಿ ನಡೆದ ವರ್ಗಾವಣೆ ಪ್ರಕ್ರಿಯೆಯಲ್ಲಿ ಒಟ್ಟು 5,676 ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊಸ ಕಾರ್ಯಕ್ಷೇತ್ರಗಳಿಗೆ ನಿಯೋಜನೆಗೊಂಡಿದ್ದಾರೆ’ ಎಂದು ವಿವರಿಸಿದರು.
‘ಆಶಾಗಳಿಗೆ ಅಗತ್ಯ ವೇತನ’
‘ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ₹ 10 ಸಾವಿರ ಪ್ರೋತ್ಸಾಹಧನ ದೊರೆಯುತ್ತಿದೆ. ರಾಜ್ಯ ಸರ್ಕಾರ ₹ 5 ಸಾವಿರ ಖಚಿತ ಪ್ರೋತ್ಸಾಹ ಧನ ನೀಡುತ್ತಿದೆ. ವೇತನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. 60:40ರ ಅನುಪಾತದಲ್ಲಿ ರಾಜ್ಯಸರ್ಕಾರದ ಪಾಲುದಾರಿಕೆಯೊಂದಿಗೆ ₹ 1500 ಪ್ರೋತ್ಸಾಹಧನ ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಇದರಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಖಚಿತ ಪ್ರೋತ್ಸಾಹಧನ ₹ 10 ಸಾವಿರ ದಾಟಲಿದ್ದು ಕಾರ್ಯಕರ್ತೆಯರು ನಡೆಸುವ ವಿವಿಧ ಕಾರ್ಯಗಳಿಗೆ ನೀಡುವ ಪ್ರೋತ್ಸಾಹಧನ ಸೇರಿಸಿದರೆ ₹12 ಸಾವಿರದಿಂದ ₹ 13 ಸಾವಿರದವರೆಗೆ ವೇತನ ದೊರೆಯಲಿದೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು. ‘ಈ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ತಿಳಿ ಹೇಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.