ADVERTISEMENT

ಕೋವಿಡ್‌ ಮೂರನೇ ಅಲೆ: ಮಕ್ಕಳ ಆರೈಕೆಗಾಗಿ ವೈದ್ಯರಿಗೆ ವಿಶೇಷ ತರಬೇತಿ

ಕೋವಿಡ್‌ ಮೂರನೇ ಅಲೆ: ಎದುರಿಸಲು ಸಜ್ಜಾಗುತ್ತಿದೆ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 12:25 IST
Last Updated 9 ಜೂನ್ 2021, 12:25 IST
ಕೋವಿಡ್‌ನಿಂದ ಬಳಲುವ ಶಿಶುಗಳ ಚಿಕಿತ್ಸೆ ಕುರಿತ ಸಿಮ್ಯುಲೇಟರ್‌ ಅನ್ನು ಸಚಿವ ಆರ್‌.ಅಶೋಕ ವೀಕ್ಷಿಸಿದರು. ಗೌರವ್‌ ಗುಪ್ತ ಅವರು ಇದ್ದಾರೆ.
ಕೋವಿಡ್‌ನಿಂದ ಬಳಲುವ ಶಿಶುಗಳ ಚಿಕಿತ್ಸೆ ಕುರಿತ ಸಿಮ್ಯುಲೇಟರ್‌ ಅನ್ನು ಸಚಿವ ಆರ್‌.ಅಶೋಕ ವೀಕ್ಷಿಸಿದರು. ಗೌರವ್‌ ಗುಪ್ತ ಅವರು ಇದ್ದಾರೆ.   

ಬೆಂಗಳೂರು: ಕೋವಿಡ್‌ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಲು ಬಿಬಿಎಂಪಿ ಈಗಾಗಲೇ ಸಿದ್ಧತೆ ಆರಂಭಿಸಿದೆ. ನಗರದಲ್ಲಿ ಮಕ್ಕಳ ತಜ್ಞರ ಕೊರತೆ ಇರುವುದರಿಂದ ಇತರ ವೈದ್ಯರನ್ನೂ ಈ ಉದ್ದೇಶಕ್ಕೆ ಬಳಸಿಕೊಳ್ಳಲು ಪಾಲಿಕೆ ನಿರ್ಧರಿಸಿದೆ. ಕೋವಿಡ್‌ ಪೀಡಿತ ಮಕ್ಕಳ ಆರೈಕೆಗೆ ಹೇಗೆ ಸಜ್ಜಾಗಬೇಕು ಎಂಬ ಕುರಿತು ವೈದ್ಯರಿಗೆ ಬಿಬಿಎಂತಿ ವತಿಯಿಂದ ಬುಧವಾರ ವಿಶೇಷ ತರಬೇತಿ ಏರ್ಪಡಿಸಲಾಯಿತು.

ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ, ‘ನಗರದಲ್ಲಿ 25 ಲಕ್ಷ ಮಕ್ಕಳಿದ್ದಾರೆ. ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು, ಕೋವಿಡ್‌ ಮೂರನೇ ಅಲೆಯಲ್ಲಿ ಏನು ತಯಾರಿ ನಡೆಸಬೇಕು ಎಂದು ಯೋಜನೆ ರೂಪಿಸಿದ್ದೇವೆ. ನಗರದಲ್ಲಿ ಮಕ್ಕಳ ತಜ್ಞರ ಸಂಖ್ಯೆ ತುಂಬಾ ಕಡಿಮೆ ಇದೆ. ಬೇರೆ ಬೇರೆ ವೈದ್ಯರನ್ನು ಹಾಗೂ ಇತರ ರೋಗತಜ್ಞರನ್ನು ಬಳಸಿಕೊಂಡು ಮಕ್ಕಳ ಚಿಕಿತ್ಸೆಗೆ ಕೊರತೆ ಆಗದಂತೆ ಕ್ರಮವಹಿಸಿದ್ದೇವೆ. ಬಿಬಿಎಂಪಿ ವೈದ್ಯರ ಜೊತೆ ಖಾಸಗಿ ಆಸ್ಪತ್ರೆಗಳ ವೈದ್ಯರಿಗೂ ಎರಡು ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಮಕ್ಕಳ ಚಿಕಿತ್ಸೆ ಒಂದು ಸವಾಲು. ದೊಡ್ಡವರಿಗೆ ಚಿಕಿತ್ಸೆ ನೀಡಿದಂತೆ ಮಕ್ಕಳಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಮಕ್ಕಳೊಂದಿಗೆ ಸಮಾಧಾನ ಚಿತ್ತದಿಂದ ನಡೆದುಕೊಳ್ಳಬೇಕು. ತಾಯಿ ಹೃದಯದಿಂದ ಅವರ ಮನಸ್ಸನ್ನು ಒಲಿಸಿಕೊಂಡು ಚಿಕಿತ್ಸೆ ನೀಡುವುದು ಕೂಡಾ ಸವಾಲಿನ ವಿಷಯ’ ಎಂದರು.

ADVERTISEMENT

‘ಐದು ವರ್ಷದ ಒಳಗಿನ ಮಕ್ಕಳು ತಾಯಿಯನ್ನು ಬಿಟ್ಟು ಇರಲು ಸಾಧ್ಯವಿಲ್ಲ. ತಾಯಿಗೆ ಕೋವಿಡ್‌ ಹರಡದಂತೆ ಏನು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಚಿಕಿತ್ಸೆ ಸಂದರ್ಭದಲ್ಲಿ ಮಕ್ಕಳನ್ನು ದಾಖಲು ಮಾಡಿದ ವಾರ್ಡ್‌ನಲ್ಲೇ ಅವರತಂದೆ ಅಥವಾ ತಾಯಿಯೂ ಉಳಿದುಕೊಳ್ಳಬೇಕಾಗುತ್ತದೆ. ಇದಕ್ಕೆ ಸೌಕರ್ಯ ಒದಗಿಸುವ ಸವಾಲೂ ನಮ್ಮ ಮುಂದಿದೆ’ ಎಂದರು.

‘ವಯಸ್ಕರಿಗೆ ನೀಡುವ ಔಷಧಗಳೇ ಬೇರೆ. ಮಕ್ಕಳಿಗೆ ನೀಡುವ ಔಷಧಗಳು ಹಾಗೂ ಅದರ ಡೋಸೇಜ್‌ಗಳು ಬೇರೆ. ಮಕ್ಕಳಿಗೆ ಯಾವ ಸಂದರ್ಭದಲ್ಲಿ ಎಂತಹ ಔಷಧ ನೀಡಬೇಕಾಗುತ್ತದೆ ಎಂಬ ಬಗ್ಗೆಯೂ ಸಾಮಾನ್ಯ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಮಕ್ಕಳ ಚಿಕಿತ್ಸೆಗೆ ಸಿಮ್ಯುಲೇಟರ್‌ಗಳ ಮೂಲಕ ತಿಳಿವಳಿಕೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಶಿಶುಗಳ ಆರೈಕೆ, ಮಕ್ಕಳಿಗೆ ಆಮ್ಲಜನಕ ಪೂರೈಸುವಾಗ ವಹಿಸಬೇಕಾದ ಮುನ್ನಚ್ಚರಿಕೆ ಕ್ರಮಗಳ ಬಗ್ಗೆಯೂ ತಿಳಿವಳಿಕೆ ನನೀಡಲಾಯಿತು. 60ಕ್ಕೂ ಅಧಿಕ ವೈದ್ಯರು ಕಾರ್ಯಕ್ರಮದ ಪ್ರಯೋಜನ ಪಡೆದರು. ಆನ್‌ಲೈನ್‌ ಮೂಲಕವೂ ಈ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

ದೂರವಾಣಿ ಮೂಲಕ ಸಮಾಲೋಚನೆ

‘ಬೆಂಗಳೂರಿನಲ್ಲಿ 10 ಮಂದಿ ಮಕ್ಕಳ ತಜ್ಞರ ತಂಡವನ್ನು ರಚಿಸಲಿದ್ದೇವೆ. ಈ ತಜ್ಞರು ದೂರವಾಣಿ ಮೂಲಕ ವೈದ್ಯಕೀಯ ಸಲಹೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ನೂರಾರು ಕಡೆ ಮಕ್ಕಳಿಗೆ ಚಿಕಿತ್ಸೆ ನೀಡುವ ಕೇಂದ್ರಗಳಿರುತ್ತವೆ. ಮಕ್ಕಳನ್ನು ಯಾವ ರೀತಿ ಆರೈಕೆ ಮಾಡಬೇಕು, ತುರ್ತು ಸಂದರ್ಭದಲ್ಲಿ ಯಾವ ಔಷಧ ನೀಡಬೇಕಾಗುತ್ತದೆ ಎಂದು ಅಲ್ಲಿನ ವೈದ್ಯರು ಕರೆ ಮಾಡಿ ಈ ತಂಡದ ತಜ್ಞರಿಂದ ಮಾಹಿತಿ ಪಡೆಯಬಹುದು’ ಎಂದು ಆರ್‌.ಅಶೋಕ ತಿಳಿಸಿದರು.

‘ಕೋವಿಡ್‌ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಕೆಲವು ಆಸ್ಪತ್ರೆಗಳನ್ನು ಗುರುತಿಸಲಾಗುತ್ತಿದೆ. ಅಲ್ಲದೇ ಮಕ್ಕಳ ಚಿಕಿತ್ಸೆಗಾಗಿಯೇ ಪದ್ಮನಾಭನಗರದಲ್ಲಿ ಹೊಸ ಆಸ್ಪತ್ರೆ ನಿರ್ಮಿಸಲು ಬಿಬಿಎಂಪಿಗೆ ಸೂಚಿಸಿದ್ದೇನೆ. ಈಗಾಗಲೇ ಅಲ್ಲಿನ ಹಾಸಿಗೆ ವ್ಯವಸ್ಥೆ ಹಾಗೂ ತಂದೆ ತಾಯಿಯೂ ಮಕ್ಕಳ ಜೊತೆ ಉಳಿದುಕೊಳ್ಳಲು ಅಗತ್ಯವಿರುವ ಸೌಕರ್ಯ ಕಲ್ಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.