ADVERTISEMENT

ಅಲೋಪಥಿ ವೈದ್ಯರ ಉಪವಾಸ ಸತ್ಯಾಗ್ರಹ ಅಂತ್ಯ

ವಾರದಲ್ಲಿ ಮುಷ್ಕರದ ಮುಂದಿನ ರೂಪರೇಷೆ ರಚನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 22:01 IST
Last Updated 14 ಫೆಬ್ರುವರಿ 2021, 22:01 IST

ಬೆಂಗಳೂರು: ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಕೆಲವು ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಅಲೋಪಥಿ ವೈದ್ಯರು 14 ದಿನಗಳಿಂದ ನಡೆಸುತ್ತಿದ್ದ ಸರಣಿ ಉಪವಾಸ ಸತ್ಯಾಗ್ರಹವು ಭಾನುವಾರ ಅಂತ್ಯವಾಗಿದೆ.

ಕೇಂದ್ರ ಸರ್ಕಾರವು ಅಧಿಸೂಚನೆ ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರಿಸಲು ವೈದ್ಯರು ನಿರ್ಧರಿಸಿದ್ದಾರೆ.

ಕೇಂದ್ರ ಸರ್ಕಾರವುಆಯುರ್ವೇದ ವೈದ್ಯರಿಗೆ ಅಪೆಂಡಿಕ್ಸ್‌, ಪಿತ್ತಕೋಶ, ಹಾನಿಕಾರಕವಲ್ಲದ ಗೆಡ್ಡೆ ತೆಗೆಯುವುದು, ಗ್ಯಾಂಗ್ರಿನ್‌, ಹಲ್ಲಿನ ರೂಟ್‌ಕ್ಯಾನಲ್‌ ಮುಂತಾದ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅನುಮತಿ ನೀಡಿದೆ.

ADVERTISEMENT

ಈ ಸಂಬಂಧ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ಅಧಿಸೂಚನೆ ಹೊರಡಿಸಿದೆ.

ಇದರಿಂದಾಗಿ ಆಯುರ್ವೇದದ ಶಲ್ಯ ಮತ್ತು ಶಾಲಕ್ಯ ಪದವೀಧರರು ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ. ಇದನ್ನು ವಿರೋಧಿಸಿರುವ ಅಲೋಪಥಿ ವೈದ್ಯರು, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರ್ನಾಟಕ ಶಾಖೆಯ ನೇತೃತ್ವದಲ್ಲಿ ‘ಮಿಕ್ಸೋಪಥಿಗೆ ವಿರೋಧ’ ಎಂಬ ಹೆಸರಿನಲ್ಲಿ 280ಕ್ಕೂ ಅಧಿಕ ವೈದ್ಯರು ಸೇವೆ ಬಹಿಷ್ಕರಿಸಿ,ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಹೋರಾಟದ ಸ್ವರೂಪ ನಿರ್ಧಾರ: ‘ವೈದ್ಯಕೀಯ ಪದ್ಧತಿಯನ್ನು ಮಿಶ್ರ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. 14 ದಿನಗಳ ಸರಣಿ ಉಪವಾಸ ಸತ್ಯಾಗ್ರಹದಲ್ಲಿ ಖಾಸಗಿ ಹಾಗೂ ಸರ್ಕಾರಿ ವೈದ್ಯರು ಪಾಲ್ಗೊಂಡಿದ್ದರು. ಈ ಅವಧಿಯಲ್ಲಿ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗಿತ್ತು. ಇದರಿಂದಾಗಿ ಸರ್ಕಾರವು ನಮ್ಮ ಮುಷ್ಕರವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಹೀಗಾಗಿ, ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಒಂದು ವಾರದಲ್ಲಿ ಮುಷ್ಕರದ ರೂಪರೇಷೆ ಸಿದ್ಧಗೊಳಿಸಿ,ಹೊರರೋಗಿ ವಿಭಾಗ ಬಂದ್‌ ಮಾಡುವ ಬಗ್ಗೆ ಕೂಡ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಐಎಂಎ ಕರ್ನಾಟಕ ಶಾಖೆಯ ಕಾರ್ಯದರ್ಶಿ ಡಾ.ಎಸ್.ಎಂ. ಪ್ರಸಾದ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.