ADVERTISEMENT

ದೊಡ್ಡನೆಕ್ಕುಂದಿ: ರಸ್ತೆ ಕುಸಿತ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 18:49 IST
Last Updated 16 ಜನವರಿ 2019, 18:49 IST
ದೊಡ್ಡನೆಕ್ಕುಂದಿಯಲ್ಲಿ ರಸ್ತೆ ಬಿರುಕು ಬಿಟ್ಟಿರುವುದು
ದೊಡ್ಡನೆಕ್ಕುಂದಿಯಲ್ಲಿ ರಸ್ತೆ ಬಿರುಕು ಬಿಟ್ಟಿರುವುದು   

ಬೆಂಗಳೂರು: ಬಹುಮಹಡಿ ಕಟ್ಟಡ ನಿರ್ಮಿಸಲು ಪಾಯ ತೆಗೆಯುವಾಗ ಮುನ್ನೆಚ್ಚರಿಕೆ ವಹಿಸದ ಕಾರಣ ಕುಂದಲಹಳ್ಳಿ ಸಿಗ್ನಲ್ ಬಳಿ ದೊಡ್ಡನೆಕ್ಕುಂದಿ–ವೈದೇಹಿ ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದೆ.

ಈ ಬಗ್ಗೆ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಮೇಯರ್‌ ಗಂಗಾಂಬಿಕೆ ಅವರು ಬುಧವಾರ ರಾತ್ರಿ ದಿಢೀರ್‌ ಸ್ಥಳ ಪರಿಶೀಲನೆ ನಡೆಸಿದರು. ಭೂಕುಸಿತಕ್ಕೆ ಕಾರಣವಾದ ಕಟ್ಟಡ ನಿರ್ಮಾಣ ಸಂಸ್ಥೆಯ ಮಾಲೀಕನ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದರು.

‘ಸಲಾರ್‌ಪುರಿಯ ಸತ್ವಾ’ ಸಂಸ್ಥೆಯವರು ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದಲ್ಲಿ ಬಹುಮಹಡಿ ಕಟ್ಟಡವನ್ನು ನಿರ್ಮಿಸುವ ಸಲುವಾಗಿ 30 ಅಡಿ ಆಳದ ಪಾಯ ತೆಗೆದಿದ್ದರು. ಇದರಿಂದಾಗಿ 40 ಅಡಿ ಅಗಲದ ರಸ್ತೆಯಲ್ಲಿ ಬಿರುಕು ಕಾಣಿಸಿದ್ದು, ಸುಮಾರು 15 ಅಡಿಗಳಷ್ಟು ಕುಸಿದಿದೆ. ಈ ಬಗ್ಗೆ ಸಾರ್ವಜನಿಕ ಆಸ್ತಿಗೆ ಧಕ್ಕೆ ಉಂಟು ಮಾಡಿದ ಆರೋಪದಡಿ ಕಟ್ಟಡ ನಿರ್ಮಾಣ ಸಂಸ್ಥೆ ಮಾಲೀಕನ ವಿರುದ್ಧ ಎಚ್‌ಎಎಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ’ ಎಂದು ಮಹದೇವಪುರ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮುನಿರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿಯಿಂದ ಅನುಮತಿ ನೀಡಿಲ್ಲ. ಈ ಜಾಗವು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗಾಗಿ ಅವರಿಂದಲೇ ಕಟ್ಟಡಕ್ಕೆ ಅನುಮತಿ ಪಡೆದಿರ ಬೇಕು’ ಎಂದು ಅವರು ಹೇಳಿದರು.

‘ಈ ರಸ್ತೆಯಲ್ಲಿ ಭಾರಿ ವಾಹನ ಸಂಚರಿಸದಂತೆ ತಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದೇವೆ. ಕೇವಲ ದ್ವಿಚಕ್ರ ವಾಹನಗಳು ಸಾಗಲು ಅವಕಾಶ ಮಾಡಿಕೊಟ್ಟಿದ್ದೇವೆ. ಭಾರಿ ವಾಹನ ಸಾಗಲು ತಾತ್ಕಾಲಿಕವಾಗಿ ಪರ್ಯಾಯ ರಸ್ತೆ ನಿರ್ಮಿಸಬೇಕಿದೆ. ಇದಕ್ಕೆ ತಗಲುವ ವೆಚ್ಚವನ್ನೂ ಈ ಕಟ್ಟಡದ ಮಾಲೀಕನಿಂದಲೇ ವಸೂಲಿ ಮಾಡುತ್ತೇವೆ’ ಎಂದರು.

‘ಕಟ್ಟಡದ ಮಾಲೀಕ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಕರೆಯನ್ನೂ ಸ್ವೀಕರಿಸುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.