ADVERTISEMENT

ಕೆಐಎ; ಡ್ರಗ್ಸ್‌ ಪತ್ತೆಗೆ ಶ್ವಾನದಳ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 16:57 IST
Last Updated 15 ಡಿಸೆಂಬರ್ 2019, 16:57 IST
ವಿಮಾನ ನಿಲ್ದಾಣದ ಕಾರ್ಗೊ ವಿಭಾಗದ ಗೋದಾಮಿನಲ್ಲಿ ಶ್ವಾನದಳದಿಂದ ಭಾನುವಾರ ತಪಾಸಣೆ ನಡೆಸಲಾಯಿತು  
ವಿಮಾನ ನಿಲ್ದಾಣದ ಕಾರ್ಗೊ ವಿಭಾಗದ ಗೋದಾಮಿನಲ್ಲಿ ಶ್ವಾನದಳದಿಂದ ಭಾನುವಾರ ತಪಾಸಣೆ ನಡೆಸಲಾಯಿತು     

ಬೆಂಗಳೂರು: ಹೊರದೇಶಗಳಿಂದ ಕೊರಿಯರ್ ಮೂಲಕ ವಿಮಾನದಲ್ಲಿ ಮಾದಕ ವಸ್ತುಗಳನ್ನು (ಡ್ರಗ್ಸ್) ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿಬೀಳುತ್ತಿದ್ದಂತೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಕೊರಿಯರ್‌ ಬಾಕ್ಸ್‌ಗಳನ್ನು ಹೊತ್ತು ತರುವ ವಿಮಾನ ಹಾಗೂ ಕೊರಿಯರ್‌ ಸಂಗ್ರಹಿಸಿಡುವ ಗೋದಾಮುಗಳ ಪರಿಶೀಲನೆಗಾಗಿ ಶ್ವಾನದಳವನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆಯೂ ಶ್ವಾನಗಳ ಸಮೇತ ಗಸ್ತು ತಿರುಗುತ್ತಿರುವ ಪೊಲೀಸರು, ಅನುಮಾನಾಸ್ಪದ ಕೊರಿಯರ್‌ ಬಾಕ್ಸ್‌ಗಳನ್ನು ತೆಗೆಸಿ ತಪಾಸಣೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ಹೈಡ್ರೊ ಗಾಂಜಾವನ್ನು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಮಾನ ಮೂಲಕವೇ ಗಾಂಜಾ ತರಿಸಿದ್ದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದರು. ಅಂದಿನಿಂದಲೇ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ADVERTISEMENT

‘ಮಾದಕ ವಸ್ತು ಸಾಗಣೆ ಹಾಗೂ ಮಾರಾಟ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಪತ್ತೆಗೆ ಶ್ವಾನದಳಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದರು.

‘ಕಾರ್ಗೊ ವಿಮಾನದ ಮೂಲಕವೇ ಡ್ರಗ್ಸ್ ಬರುವ ಅನುಮಾನವಿದೆ. ಹೀಗಾಗಿ, ಪ್ರತಿ ಬಾಕ್ಸ್‌ಗಳನ್ನು ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ. ಅದಾದ ಬಳಿಕ ಶ್ವಾನದಳದಿಂದ ಪರಿಶೀಲನೆ ಮಾಡಿಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.